ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಕಗ್ಗಂಟು. ಮೈತ್ರಿ ಸರ್ಕಾರದ ನಡೆ, ಒಡಕಿನೆಡೆಗೆ

ಆರ್ ಪಿ ಜಗದೀಶ್

ಲೋಕಸಭಾ ಚುಣಾವಣೆಗೆ ಸೀಟು ಹಂಚಿಕೆಯು ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ತಂತಿ ಮೇಲಿನ ನಡಿಗೆಯಂತಾಗಿದ್ದು ದಿನೇ ದಿನೇ ಕಂಗಟ್ಟಾಗುತ್ತಿದೆ. ಈ ಎರಡು ಪಕ್ಷಗಳ ಹಗ್ಗಜಗ್ಗಾಟ ಮುಂದುವರೆದಿದೆ. ಈ ನಡುವೆ ಇವರ ಜಗಳದ ಲಾಭ ಪಡೆದು ಬಂಡಾಯ ಅಭ್ಯರ್ಥಿಗಳಿಗೆ ಗಾಳ ಹಾಕಲು ಬಿಜೆಪಿ ಹೊಂಚು ಹಾಕುತ್ತಿದೆ.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ೧೬, ಕಾಂಗ್ರೆಸ್ ೧೦, ಜೆಡಿಎಸ್ ೨, ಸ್ಥಾನಗಳನ್ನು ಹೊಂದಿವೆ. ಈ ಪೈಕಿ ಬಿಜೆಪಿಯ ಶ್ರೀರಾಮುಲು (ಬಳ್ಳಾರಿ), ಶಿವಮೊಗ್ಗ ಕ್ಷೇತ್ರ ಯಡಿಯೂರಪ್ಪ ಹಾಗೂ ಮಂಡ್ಯದಿಂದ ಪುಟ್ಟರಾಜು ರಾಜೀನಾಮೆ ನೀಡಿದ್ದರು. ಇದರಲ್ಲಿ ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳನ್ನು ಆಯಾಯ ಪಕ್ಷಗಳು ಉಳಿಸಿಕೊಂಡಿವೆ. ಇನ್ನು ಬಳ್ಳಾರಿಯಲ್ಲಿ ಭಾರೀ ಅಂತರದಿಂದ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಜಯಭೇರಿ ಹೊಡೆದು ಬಿಜೆಪಿಯಿಂದ ಈ ಸ್ಥಾನ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಗೆಲುವಿನ ಉಮೇದು ಹಾಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಆ ಪಕ್ಷಗಳಲ್ಲಿ ಲೋಕಸಭಾ ಟಿಕೆಟ್‌ಗಾಗಿ ಕಿತ್ತಾಟ ಜೋರಾಗಿದೆ. ಪಕ್ಷದೊಳಗಿನ ಬೇಡಿಕೆಗಿಂತ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಸೀಟು ಹಂಚಿಕೆಗಾಗಿ ಪೈಪೋಟಿ ಮುಂದುವರೆದಿದೆ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯ ಹಿನ್ನಲೆಯಲ್ಲಿ ರಾಜ್ಯದ ಮೈತ್ರಿ ಸರ್ಕಾರ ಮಹಾ ಘಟಬಂಧನ್ ಜೊತೆ ಸೇರಿ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಒಂದೊಂದು ಟಿಕೆಟ್‌ಗೂ ಹೋರಾಟ ನಡೆಯುತ್ತಿದೆ.

ರಾಷ್ಟ್ರದ ಪ್ರಧಾನಿ ಹುದ್ದೆಯ ರುಚಿ ಕಂಡಿರುವ ಜೆ.ಡಿ.ಎಸ್‌ನ ವರಿಷ್ಠ ಹೆಚ್.ಡಿ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗುವ ಹಂಬಲ ಹೊಂದಿದ್ದಾರೆ. ತಮ್ಮ ಪಕ್ಷಕ್ಕೆ ೮ ಸ್ಥಾನ ಬಂದರೂ “ಮೋದಿ ನಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುವೆ”ಎಂದು ಗೌಡರು ಸವಾಲು ಹಾಕಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಪಕ್ಷಗಳಿಗೆ ೨೦-೨೨ ಸ್ಥಾನ ಗಳಿಸಿಕೊಟ್ಟರೆ ಕನ್ನಡಿಗನೊಬ್ಬ ಮತ್ತೊಮ್ಮೆ ಪ್ರಧಾನಿಯಾಗುತ್ತಾನೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಹಾಸನ ಹಾಗೂ ಮಂಡ್ಯ ಈ ೨ ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್ ೧೨ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್‌ನ್ನು ಆಗ್ರಹಿಸಿದೆ. ಒಕ್ಕಲಿಗರ ಪ್ರಾಬಲ್ಯ ಇರುವ ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜೊತೆಗೆ ಬೀದರ್, ರಾಯಚೂರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನೂ ತಮಗೆ ಬಿಟ್ಟುಕೊಡುವಂತೆ ಕೇಳುತ್ತಿದೆ. ಕಾಂಗ್ರೆಸ್‌ನ ಹಾಲೀ ಸಂಸದರಿರುವ ಕ್ಷೇತ್ರಗಳ ಮೇಲೂ ಕಣ್ಣು ಹಾಕಿರುವುದು ಸೋಜಿಗದ ಸಂಗತಿ. ಇಷ್ಟು ಸಾಲದು ಎಂಬಂತೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ (ಚಿಕ್ಕಬಳ್ಳಾಪುರ), ಮುದ್ದಹನುಮಗೌಡ (ತುಮಕೂರು), ಹಾಗೂ ಚಂದ್ರಣ್ಣ (ಚಿತ್ರದುರ್ಗ) ಸಂಸದರಾಗಿರುವ ಈ ಕ್ಷೇತ್ರಗಳನ್ನೂ ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಲು ಜೆಡಿಎಸ್ ಪ್ರಯತ್ನಿಸುವುದು ಎಷ್ಟು ಸಮಂಜಸ? ಕನಕಪುರ ಕ್ಷೇತ್ರವನ್ನು ಏಕೆ ಕೇಳುತ್ತಿಲ್ಲ ಎಂಬುದು ನಿಗೂಢ.

ಈ ಮಧ್ಯೆ ಮಂಡ್ಯ ಸೀಟಿಗಾಗಿ ದಿವಂಗತ ಅಂಬರೀಶ್ ಪತ್ನಿ ನಟಿ ಸುಮಲತಾ ಬೇಡಿಕೆ ಇಟ್ಟಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ಈ ಕ್ಷೇತ್ರ ಜೆಡಿಎಸ್ ಸೇರಿದೆ. ಇತ್ತೀಚೆಗೆ ನಡೆದ ಲೋಕಸಭಾ ಉಪಚುಣಾವಣೆಯಲ್ಲಿ ಈ ಕ್ಷೇತ್ರದಿಂದ ಶಿವರಾಮೇಗೌಡರು ಸ್ಪರ್ಧಿಸಿ ಗೆದ್ದಿದ್ದಾರೆ. ಆಗಲೇ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈಗ ಮತ್ತೆ ಸುಮಲತಾ ಕ್ಯಾತೆ ತೆಗೆಯುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ನಾಯಕರ ಮನವಿಗೆ ಮಣಿಯದೆ ಜಿಲ್ಲೆಯಲ್ಲಿ ಪ್ರವಾಸ-ಪ್ರಚಾರ ಆರಂಭಿಸಿರುವುದು ಕಾಂಗ್ರೆಸ್‌ ಜೆಡಿಎಸ್ ಪಕ್ಷಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಕ್ಷೇತ್ರದ ಹಾಲೀ ಸದಸ್ಯ ಶಿವರಾಮೇಗೌಡರನ್ನು “ಬಲಿಪಶು” ಮಾಡಿ ಮುಖ್ಯಮಂತ್ರಿಯ ಏಕೈಕ ಪುತ್ರ ನಟ ನಿಖಿಲ್ ಕುಮಾರ್ ಅವರನ್ನು ದಿಢೀರ್  ರಾಜಕೀಯಕ್ಕೆ ತಂದು ಈ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುವುದು ಯಾವ ನ್ಯಾಯ? ಜೆಡಿಎಸ್‌ಗೆ ನಿಖಿಲ್ ಕುಮಾರ್ ಅವರ ಕೊಡುಗೆಯಾದರೂ ಏನು- ಎಂಬ ಪ್ರಶ್ನೆ ಸ್ಥಳೀಯ ಮತದಾತ ಬಂಧುಗಳಲ್ಲಿ ಮೂಡಿದೆ. ಮೈತ್ರಿ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿ ಸುಮಲತಾ ಹಠಕ್ಕೆ ಬಿದ್ದು ಪಕ್ಷೇತರರಾಗಿ ಸ್ಪರ್ಧೆಗಿಳಿದರೆ, ಇಂತಹ ಅವಕಾಶಕ್ಕಾಗಿ ಕಾಯುತ್ತಿರುವ ಬಿಜೆಪಿ, ಸುಮಲತಾ ಅವರಿಗೆ ಸಾಥ್ ನೀಡಿದರೆ ನಿಖಿಲ್ ಭವಿಷ್ಯ ಸಂಕಟಕ್ಕೆ ಸಿಕ್ಕುವುದು ಖಚಿತ.

“ನಮ್ಮ ಕುಟುಂಬಕ್ಕೆ ಅಧಿಕಾರದ ಆಸೆಯಿಲ್ಲ, ಹೋರಾಟ ನಮ್ಮ ಹುಟ್ಟು ಗುಣ” ಎಂಬುದು ದೊಡ್ಡಗೌಡರು ಹಾಗೂ ಅವರ ಮಕ್ಕಳ ಊವಾಚ. ದೊಡ್ಡಗೌಡರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರು. ಕುಮಾರಸ್ವಾಮಿ ೨ನೇ ಬಾರಿಗೆ ಮುಖ್ಯಮಂತ್ರಿ. ಮೊದಲನೆ ಸಾರಿ ಬಿಜೆಪಿಯೊಂದಿಗೆ ಸೇರಿ ಈಗ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ, ತಂದೆಯ ಹಾಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನು ಜೆಡಿಎಸ್ ಅಧಿಕಾರದಲ್ಲಿದ್ದಾಗಲೆಲ್ಲಾ ರೇವಣ್ಣ ಖಾಯಂ ಲೋಕೋಪಯೋಗಿ ಮಂತ್ರಿ. ಮುಖ್ಯಮಂತ್ರಿಗಳ ಪತ್ನಿ ಅನಿತಾ ಕುಮಾರಸ್ವಾಮಿ 2ನೇ ಬಾರಿಗೆ ಶಾಸಕಿ. ರೇವಣ್ಣನವರ ಪತ್ನಿ ಹಾಸನ ಜಿಲ್ಲಾ ಪರಿಷತ್ ಸದಸ್ಯೆ. ಗೌಡರ ಬೀಗರಾದ ಡಿ.ಸಿ ತಮ್ಮಣ್ಣ ಸಚಿವರು. ಗೌಡರ ಹಿರಿಯ ಅಳಿಯ ಡಾ. ಮಂಜುನಾಥ್ ಸೋದರ ಚನ್ನರಾಯಪಟ್ಟಣ ಕ್ಷೇತ್ರದ ಶಾಸಕರು. ಮತ್ತೊಬ್ಬ ಬೀಗರಾದ ಮಾಜಿ ಉಪಕುಲಪತಿ ಪ್ರೊ. ಕೆ.ಎಸ್‍. ರಂಗಪ್ಪ ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಮೈಸೂರಿನಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಮತ್ತೆ ಮೈಸೂರಿನಿಂದ ಲೋಕಸಭೆಗೆ ಟಿಕೆಟ್ ನೀಡುವ ಆಲೋಚನೆಯೂ ಪಕ್ಷದ ವರಿಷ್ಠರಿಗಿದೆಯಂತೆ. ದೊಡ್ಡಗೌಡರಿಗೆ ರೇವಣ್ಣ ಹಾಗೂ ಕುಮಾರಣ್ಣ ಎರಡು ಕಣ್ಣುಗಳಿದ್ದಂತೆ. ಅವರ ಇಬ್ಬರು ಸೊಸೆಯಂದಿರು ಕಣ್ಮಣಿಗಳಿದ್ದಂತೆ. ಇನ್ನು ಕುಟುಂಬದ ಭವಿಷ್ಯದ ಕುಡಿಗಳಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿಯವರು ಲೋಕಸಭಾ ಸದಸ್ಯರಾಗಬೇಕೆಂಬುದು ಕುಟುಂಬದ ಮಹಾದಾಸೆ. ಪಕ್ಷದ ಹೆಸರು ಜಾತ್ಯಾತೀತ ಜನತಾದಳ. ಆದರೆ ಎಲ್ಲವೂ ಜಾತಿಮಯ. ಪಕ್ಷದ ಚಿಹ್ನೆ ತೆನೆಹೊತ್ತ ರೈತ ಮಹಿಳೆ. ಆದರೂ, ಕುಟುಂಬದಾಚೆಯ ಒಬ್ಬ ಮಹಿಳೆಗೂ ಟಿಕೆಟ್ ನೀಡುವ ಯೋಚನೆ ಕಿಂಚಿತ್ತೂ ಇಲ್ಲ.

ಒಬ್ಬ ಮೊಮ್ಮಗ ಪ್ರಜ್ವಲ್-ಗೆ ಟಿಕೆಟ್ ನೀಡಿ ಇನ್ನೊಬ್ಬ ಮೊಮ್ಮಗ ನಿಖಿಲ್-ಗೆ ಟಿಕೆಟ್ ಕೊಡದಿದ್ದರೆ ಪಕ್ಷಪಾತ ಆಗುವುದಿಲ್ಲವೇ? ಹೀಗಾಗಿ ಇಬ್ಬರಿಗೂ ನ್ಯಾಯ ಒದಗಿಸುವುದು ತಮ್ಮ ಉದ್ದೇಶ ಎಂದು ಗೌಡರು ತಮ್ಮ ನಿಲುವನ್ನು ಸಮರ್ಥಿಸಿಕೊಂದ್ದಾರೆ. “ನನಗೂ ವಯಸ್ಸಾಗಿದ್ದು ಹಾಸನದಿಂದ ಸ್ಪರ್ಧಿಸಿ ಗೆದ್ದು ಗಾಲಿ ಕುರ್ಚಿಯಲ್ಲಿ ಲೋಕಸಭೆಗೆ ಹೋಗುವುದು ಸರಿಯೇ?” ಹೀಗಾಗಿ ಪ್ರಜ್ವಲ್‌ಗೆ ತಮ್ಮ ಸ್ಥಾನ ಬಿಟ್ಟುಕೊಡುವುದಾಗಿ ಪ್ರಕಟಿಸಿದ್ದರು. ಈಗ ಹಾಸನ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಅಲ್ಲದೆ ಸರ್ಕಾರದಲ್ಲಿ ಜೆಡಿಎಸ್ ಪಾಲಿನ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಸ್ವಜಾತಿಯವರನ್ನೇ ತುಂಬಿದ್ದಾರೆ. ಸಂಪುಟದಲ್ಲಿ ಇವರ ಪಾಲಿನ ಪೈಕಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಅವಕಾಶವೇ ಇಲ್ಲದಂತಾಗಿದೆ. ಇದು ಜಾತ್ಯಾತೀತ ಜನತಾದಳದ ಸಿದ್ದಾಂತ. ಒಕ್ಕಲಿಗರ ಪ್ರಾಬಲ್ಯವಿರುವ ದಕ್ಷಿಣದ ಜಿಲ್ಲೆಗಳಲ್ಲಿ ಕುಟುಂಬದ ಸಾಮ್ರಾಜ್ಯ ಸ್ಥಾಪಿಸುವುದು ಇವರ ಏಕೈಕ ಗುರಿ.

ಕಾಂಗ್ರೆಸ್‍ನೊಂದಿಗೆ ಟಿಕೆಟ್‍ ಹಂಚಿಕೆ ಹಾಗೂ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಕೆ ವಿಚಾರದಲ್ಲಿ “ಹಾಡುವ ಹಕ್ಕಿ” (ಜೆಡಿಎಸ್‍ ಅಧ್ಯಕ್ಷ ವಿಶ್ವನಾಥ್) ತಾನು ಹಾಡುವುದನ್ನೇ ಮರೆತು, ರೆಕ್ಕೆ ಪುಕ್ಕ ಮುದುರಿಕೊಂಡು, ಪಶ್ಚಾತಾಪ ಪಡುತ್ತಿದೆ. ಅಂದರೆ, ಕುದಿಯುವ ಎಣ್ಣೆಯಿಂದ (ಕಾಂಗ್ರೆಸ್‍) ಉರಿಯುವ ಒಲೆಗೆ (ಜನತಾ ದಳ) ಬಿದ್ದಂತಾಗಿದೆ “ಹಾಡುವ ಹಕ್ಕಿ”ಯ ಸ್ಥಿತಿ.

ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್ ಸ್ಥಿತಿ ಹೇಳುವಂತಿಲ್ಲ. ಏಕೆಂದರೆ ಎಲ್ಲವೂ “ಕೈ” ಕಮಾಂಡ್ ಇಚ್ಛೆ. ರಾಜ್ಯ ನಾಯಕರದ್ದು ಏನಿದ್ದರೂ ಹೌದಪ್ಪ ಸ್ಥಿತಿ. ೧೨೫ ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಯಾವ ರಾಜ್ಯದಲ್ಲೂ, ಯಾವ ಸಂದರ್ಭದಲ್ಲೂ, ಹೀಗೆ ಮಂಡಿಯೂರಿ ಅಧಿಕಾರವನ್ನು ಮೈತ್ರಿ ಸರ್ಕಾರಕ್ಕೆ ಧಾರೆ ಎರೆದ ನಿದರ್ಶನವಿಲ್ಲ. ಟಿಕೆಟ್ ಹಂಚಿಕೆಯಲ್ಲೂ ಇದು ಪುನರಾವರ್ತನೆಯಾಗಿ ದೊಡ್ಡಗೌಡರ “ಪಾದಪೂಜೆ”ಮಾಡಿ ಅವರು ಕೇಳಿದಷ್ಟೂ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೂ ಆಶ್ಚರ್ಯವಿಲ್ಲ. ಹೀಗಾದರೆ, ರಾಜ್ಯ ಕಾಂಗ್ರೆಸ್‍ ಕಾರ್ಯಕರ್ತರ ಮನಸ್ಸು ಒಡೆದು, ಅವರು ಚುನಾವಣೆಯಲ್ಲಿ ಜೆಡಿಎಸ್‍-ಗೆ ‘ಕೈ’ಎತ್ತುವ ಸಾಧ್ಯತೆ ಹೆಚ್ಚು. “ಕುಮಾರಸ್ವಾಮಿಗೆ ತಮ್ಮ ಬೆಂಬಲ; ಅವರೇ ನಮ್ಮ ಮುಖ್ಯಮಂತ್ರಿ” ಎಂದು ಸಿದ್ದರಾಮಯ್ಯ 9 ತಿಂಗಳ ಹಿಂದೆ ಘೋಷಿಸಿದಾಗ ಅವರ ಸ್ಥಿತಿ ಶೋಚನೀಯವಾಗಿತ್ತು. ಈಗೇನೂ ಭಿನ್ನವಾಗಿಲ್ಲ. ಏಕೆಂದರೆ, ರಾಜ್ಯ ಕಾಂಗ್ರೆಸ್‌ ನಾಯಕರ ಮಾತಿಗೆ ಹೈಕಮಾಂಡ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತು. ಈ ದ್ವಂದ್ವಗಳಿಂದಾಗಿ “ಮೈತ್ರಿ ಸರ್ಕಾರದ ನಡೆ ಅಭಿವೃದ್ದಿ ಕಡೆಗೆ”ಎಂಬ ಘೋಷ ವಾಕ್ಯದ ಬದಲಾಗಿ “ಮೈತ್ರಿ ಸರ್ಕಾರದ ನಡೆ ಒಡಕಿನೆಡೆಗೆ” ಎಂಬತಾಗಿದೆ.

ಇನ್ನು ರಾಜ್ಯ ಬಿಜೆಪಿಯ ಸ್ಥಿತಿ ವಿಭಿನ್ನವಾಗಿಲ್ಲ. ಮುಸುಕಿನ ಗುದ್ದಾಟ, ಭಿನ್ನಾಭಿಪ್ರಾಯ ಪಕ್ಷದಲ್ಲಿ ಮನೆ ಮಾಡಿದೆ. ಜೊತೆಗೆ ಮೈತ್ರಿ ಸರ್ಕಾರ ಉರುಳಿಸಲು ವಿಶ್ವಪ್ರಯತ್ನ ಮಾಡಿ “ಕೈ”ಮಾತ್ರವಲ್ಲ, ಮೈಯಲ್ಲಾ ಸುಟ್ಟಿಕೊಂಡಿರುವುದು ಜನತೆಯ ಕಣ್ಣಮುಂದೆ ಇದೆ. ಆದರೂ, ಸೋತರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮೊಂಡುವಾದಕ್ಕೆ ಗಂಟುಬಿದ್ದು ತ್ರಿವಿಕ್ರಮನಂತೆ ಗದ್ದುಗೆ ಹಿಡಿಯುವ ಹುನ್ನಾರ ಮುಂದುವರೆದಿದೆ.

ರಾಷ್ಟ್ರ ಹಾಗೂ ರಾಜ್ಯದಲ್ಲಿ ಹಳ್ಳದ ಹಾದಿ ಹಿಡಿದಿದ್ದ ಬಿಜೆಪಿ ಪಾಲಿಗೆ ಕೇಂದ್ರದ ಬಜೆಟ್ ಹಾಗೂ ಯುದ್ಧದ ಜಯಭೇರಿ ಪ್ರಬಲ ಅಸ್ತ್ರಗಳಾಗಿವೆ. ಮಾತಿನಲ್ಲೇ ಜನರನ್ನು ಮೋಡಿ ಮಾಡಬಲ್ಲ ಪ್ರಧಾನಿ ಮೋದಿ ಅವರಿಗೆ ಈ ಹೊಸ ಅಸ್ತ್ರಗಳು ವರದಾನವಾಗಿವೆ. ಈ ನಡುವೆ ರಾಜಕೀಯ ಪ್ರಜ್ಞಾವಂತರಾದ ರಾಜ್ಯದ ಮತದಾರರು ಜಾತಿ-ಹಣ-ಎಣ್ಣೆ ಹಾಗೂ ತೋಳ್ಬಲಕ್ಕೆ ಮಣಿಯದೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವರೇ? ಎಂಬುದನ್ನು ಕಾದು ನೋಡಬೇಕು.