August 17, 2019

ಜಿಲ್ಲೆಯಲ್ಲಿ ಶೇ. 72.57 ರಷ್ಟು ಮತದಾನ

ಹೆಸರಿಗಾಗಿ ಹುಡುಕಾಟ, ಮತಕೇಂದ್ರಗಳಿಗೆ ತಡಕಾಟ, ಆರಂಭದಲ್ಲಿ ಯಂತ್ರಗಳ ಕಾಟ

ದಾವಣಗೆರೆ : ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಾಟ, ಒಂದು ಮತ ಕೇಂದ್ರದಿಂದ ಮತ್ತೊಂದಕ್ಕೆ ಹಕ್ಕು ಚಲಾವಣೆಗೆ ತಡಕಾಟ, ಮತ ಯಂತ್ರಗಳ ಆರಂಭಿಕ ಕಾಟ ದ ನಡುವೆಯೂ ಜಿಲ್ಲೆಯಲ್ಲಿ  ಶೇ 72.57 ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭ ವಾದಾಗ ಮಂದಗತಿಯಿಂದ ಕೂಡಿತ್ತು. ಜಿಲ್ಲೆ ಯಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶೇ.6ರಷ್ಟು ಮಾತ್ರ ಮತದಾನವಾಗಿತ್ತು. ನಂತರ ಮತದಾರ ಪ್ರಭುಗಳು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸಲು ಆರಂಭಿಸಿದರು.

ಮಧ್ಯಾಹ್ನದ ಬಿಸಿಲಿನ ಝಳಕ್ಕೆ ಒಂದಿಷ್ಟು ಮತದಾನ ಕುಂಠಿತವಾದಂತೆ ಕಂಡು ಬಂದರೂ ಸಂಜೆ 4ರ ನಂತರ ಮತ್ತೆ ಚುರುಕು ಪಡೆಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಬಿರುಸಿನ ಶೇ.53.90 ರಷ್ಟು ಮಾತ್ರ ಮತದಾನವಾಗಿತ್ತು.

ಇದೇ ಮೊದಲ ಬಾರಿ ಮತ ಕೇಂದ್ರಗಳಿಗೆ ಬಂದಿದ್ದ ಯುವ ಪಡೆ ಅತ್ಯುತ್ಸಾಹದಿಂದ ಮತ  ಚಲಾಯಿಸಿದರೆ. ಇಳಿ ವಯಸ್ಸಿನಲ್ಲೂ ಇತರರ ಸಹಾಯ ಪಡೆದು ಮತ ಕೇಂದ್ರಗಳಿಗೆ ಬಂದವರು ಹಾಗೂ ವಿಕಲಚೇತನರು ಇತರರಿಗೆ ಪ್ರೇರಣೆಯಾಗಿದ್ದರು.

ಕೆಲವು ಕಡೆ ಮತ ಯಂತ್ರಗಳು ಆರಂಭದ ಸಮಯದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಪರಿಣಾಮ ಮತದಾನ ಕೆಲವು ನಿಮಿಷಗಳ ಕಾಲ ತಡವಾಗಿ ಆರಂಭವಾಗಿದ್ದರೆ. ಮತ್ತೆ ಕೆಲವೆಡೆ ಚುನಾವಣಾ ಆಯೋಗದಿಂದ ನೇಮಕವಾಗಿದ್ದ  ಬಿಎಲ್ ಓಗಳು ಸಮರ್ಪಕ ಮಾಹಿತಿ ನೀಡದೇ ಇದ್ದುದು ಮತದಾರರಿಗೆ ಕಿರಿ ಕಿರಿ ಎನಿಸಿತು.

ಸಿದ್ದೇಶ್ವರ ಬಂದಾಗ ಕೈ ಕೊಟ್ಟ ಯಂತ್ರ: ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರು ಮಾಗನೂರು ಬಸಪ್ಪ ಶಾಲೆಯ ಮತದಾನ ಕೇಂದ್ರದಲ್ಲಿ ಮತದಾನ ಮಾಡುವ ವೇಳೆ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಈ ವೇಳೆ ಮೂರ್ನಾಲ್ಕು ನಿಮಿಷ ಕಾದು  ಕುಳಿತ ಅವರು, ನಂತರ ಪತ್ನಿ ಗಾಯತ್ರಿ ಅವರೊಂದಿಗೆ ಮತದಾನ  ಮಾಡಿದರು.

ದಾವಣಗೆರೆ ನಿಟ್ಟುವಳ್ಳಿ ಲೆನಿನ್ ನಗರದ ಕಾಟನ್ ಮಾರ್ಕೆಟ್ ಶಾಲೆ ಬಳಿ ಮತದಾನಕ್ಕೆ ಬಂದ ಮತದಾರರಿಗೆ ಸಮರ್ಪಕ ಮಾಹಿತಿ ನೀಡದ ಪಿಎಲ್ಒ ಗಳು ಅತ್ತ ಇತ್ತ ಅಲೆ ದಾಡಿಸುತ್ತಿದ್ದುದು ಕಂಡು ಬಂತು.  ತಂದ ಗುರುತಿನ ಚೀಟಿಯನ್ನು ಸರಿಯಾಗಿಯೂ ಗಮನಿಸದೆ ಅಲ್ಲಿ ಹೋಗಿ ಇಲ್ಲಿ ಹೋಗಿ ಎಂದು ಒಬ್ಬರ ಮೇಲೊಬ್ಬರು ಹೇಳುತ್ತಿದ್ದು ದರಿಂದ ಕೆಲ ಮತದಾರರು ನಿರಾಶರಾಗಿ ಹಿಂದಿರುಗಿದರು.

ತೆಲಗಿ ಗ್ರಾಮಕ್ಕೆ ಆಗಮಿಸಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರು ಪತ್ರಿಕೆ ಯೊಂದಿಗೆ ಮಾತನಾಡುತ್ತಾ, ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 8 ಕ್ಷೇತ್ರ ಗಳಲ್ಲೂ ಬಿಜೆಪಿ ಲೀಡ್ ಪಡೆಯಲಿದೆ. ಜಯ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತಕ್ಷೇತ್ರಗಳಲ್ಲಿ ಒಂದು ರೌಂಡ್: ಬೆಳಿಗ್ಗೆ 10 ಗಂಟೆಗೆ ದೊಡ್ಡಬಾತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 36ರಲ್ಲಿದ್ದ 655 ಮತದಾರರ ಪೈಕಿ 60 ಪುರುಷರು ಹಾಗೂ 33 ಮಹಿಳೆಯರು ಸೇರಿ 93 ಜನ ತಮ್ಮ ಹಕ್ಕು ಚಲಾಯಿಸಿದ್ದರು.  ಮತಗಟ್ಟೆ 35ರಲ್ಲಿದ್ದ  769 ಮತದಾರರ  ಪೈಕಿ 65  ಜನ ಪುರುಷರು ಹಾಗೂ 46 ಮಹಿಳೆಯರು ಸೇರಿ ಒಟ್ಟು 111 ಜನರು ಮತ ಚಲಾಯಿಸಿದ್ದರು.

ಇದೇ ಮತಗಟ್ಟೆಯಲ್ಲಿ 85  ವರ್ಷದ ಅಂಧ ದುರುಗಪ್ಪ ಹಾಗೂ 80 ವರ್ಷದ ದುರುಗಮ್ಮ ಅವರು ತಮ್ಮ ಮಗ ನೀಲಪ್ಪ ಅವರ ಸಹಾಯದಿಂದ ಬೂತ್ ಸಂಖ್ಯೆ 39ರಲ್ಲಿ ಮತ ಚಲಾಯಿಸಿ ಯುವಜನತೆಗೆ ಪ್ರೇರಣೆಯಾದರು.

10.30ರ ವೇಳೆಗೆ ಹರಿಹರದ ಪಿ.ಬಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ರುವ ಬೂತ್ ಸಂಖ್ಯೆ 51ರಲ್ಲಿ 1093 ಮತದಾರರ ಪೈಕಿ 91 ಮಹಿಳೆಯರ ಹಾಗೂ 51 ಪುರುಷರು ಸೇರಿ ಒಟ್ಟು 142 ಜನ ಮಾತ್ರ ಮತ ಚಲಾಯಿಸಿದ್ದರು.  ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಅಂಗವಿಕಲರು ಹಾಗೂ ವಯಸ್ಸಾದವರನ್ನು ಗಾಲಿ ಖುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಬಂದು ಮತದಾನ ಮಾಡಲು ಸಹಾಯ ಮಾಡುತ್ತಿದ್ದುದು ಕಂಡು ಬಂತು.

ಬೆಳಿಗ್ಗೆ 11.15ಕ್ಕೆ ಹರಪನಹಳ್ಳಿ ದುಗ್ಗಾವತಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೂತ್ ಸಂಖ್ಯೆ 215ರಲ್ಲಿದ್ದ 912 ಮತದಾರರ ಪೈಕಿ 96 ಪುರುಷರು 18 ಮಹಿಳೆಯರು ಸೇರಿ ಒಟ್ಟು 114 ಜನರು ಮತ ಚಲಾಯಿಸಿದ್ದರು.

11.25ಕ್ಕೆ ತೆಲಗಿ ಗ್ರಾಮ ಪಂಚಾಯ್ತಿಯ ಬೂತ್ ಸಂಖ್ಯೆ 209ರಲ್ಲಿದ್ದ 689 ಮತದರಾರ ಪೈಕಿ 119 ಗಂಡು ಹಾಗೂ 96 ಹೆಣ್ಣು ಸೇರಿ 213 ಜನ ಮತ ಚಲಾಯಿಸಿದ್ದರು.

ಜಗಳೂರು ತಾಲ್ಲೂಕಿನ ಬಸವನಕೋಟೆಯ ಶ್ರೀ ಬೊಮ್ಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ವೇಳೆಗೆ ಮತಗಟ್ಟೆ ಸಂಖ್ಯೆ 13ರಲ್ಲಿದ್ದ 868 ಜನರ ಪೈಕಿ 203 ಪುರುಷರು ಹಾಗೂ 201 ಮಹಿಳೆಯರು ಸೇರಿ ಒಟ್ಟು 404 ಜನ ಮತದಾನ ಮಾಡಿದ್ದರು.

ಮಧ್ಯಾಹ್ನ 2.50ರ ವೇಳೆಗೆ ಜಗಳೂರು ತಾಲ್ಲೂಕು ಬಿಳಿಚೋಡು ಗ್ರಾಮದ ಸಖಿ ಮತಗಟ್ಟೆ ಸಂಖ್ಯೆ 165ರಲ್ಲಿದ್ದ 636 ಮತದಾರರ ಪೈಕಿ  206 ಪುರುಷರು ಹಾಗೂ 183 ಮ ಹಿಳೆಯರು ಸೇರಿ ಒಟ್ಟು 389 ಜನ ಮತ ಚಲಾಯಿಸಿದ್ದರು.

ಕಕ್ಕರಗೊಳ್ಳ ಗ್ರಾಮದಲ್ಲಿ ಶೇ.74.26ರಷ್ಟು ಮತದಾನವಾಗಿದೆ. 3956 ಮತದಾರರ ಪೈಕಿ 2938 ಮತದಾರರು ಹಕ್ಕು ಚಲಾಯಿಸಿದ್ದಾರೆ.

Please follow and like us: