ಜಿಲ್ಲೆಯಲ್ಲಿ ನೆರೆ; ಜಗಳೂರಿನಲ್ಲಿ ಬರ

ಬಿ.ಪಿ.ಸುಭಾನ್

ಜಗಳೂರು ತಾಲ್ಲೂಕಿನಲ್ಲಿ ವಿಚಿತ್ರ ಬರ ಪರಸ್ಥಿತಿ: ಕೆರೆ-ಗೋಕಟ್ಟೆಗಳಲ್ಲಿ ಹನಿ ನೀರಿಲ್ಲ
550 ಎಕರೆ ವಿಸ್ತೀರ್ಣದ ಜಗಳೂರು ಕೆರೆ ಹನಿ ನೀರಿಲ್ಲದೆ ಬರಿದಾಗಿದೆ

ಜಗಳೂರು, ಆ.9- ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಯಾದ್ಯಂತ ಮಳೆ-ನೆರೆ ಪರಿಸ್ಥಿತಿ ಇದ್ದರೂ ಜಗಳೂರು ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಮುಂದುವರೆದಿದೆ. ಜಗಳೂರು ಪಟ್ಟಣದ ಕೆರೆ ಸೇರಿದಂತೆ ಸಂಗೇನಹಳ್ಳಿ, ಗಡಿ ಮಾಕುಂಟೆ, ಬಿಳಿಚೋಡು ಮುಂತಾದ ತಾಲ್ಲೂಕಿನ 53 ಕೆರೆಗಳಲ್ಲಿ ಜಾನುವಾರುಗಳಿಗೆ ಪಕ್ಷಿಗಳಿಗೆ ಕುಡಿಯಲೂ ಸಹ ಹನಿ ನೀರಿಲ್ಲದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿಗೆ ಬರ ಪರಿಸ್ಥಿತಿ ಹೊಸದೇನೂ ಅಲ್ಲ. ಆದರೆ, ಈ ಬಾರಿ ವಿಚಿತ್ರ ರೀತಿಯ ಬರ ಪರಿಸ್ಥಿತಿ ಉಂಟಾಗಿದೆ. ಆಗಸ್ಟ್ ವೊದಲ ವಾರ ‘ಆಶ್ಲೇಷ ಮಳೆ’ ರಾಜ್ಯದಾದ್ಯಂತ ಸುರಿಯುತ್ತಿದ್ದರೂ ತಾಲ್ಲೂಕಿಗೆ ಕರುಣೆ ತೋರಿಸಿಲ್ಲ. ಕೇವಲ ತುಂತುರು ಮಳೆ ಬರುತ್ತಿದ್ದು, ಇದರಿಂದ ಈಗಾಗಲೇ ಬಿತ್ತಿರುವ ಬೆಳೆಗಳಿಗೆ ಗುಟುಕು ನೀರು ನೀಡಿದಂತಾಗಿದೆ.

ತಾಲ್ಲೂಕಿನಲ್ಲಿ ಕೆರೆ-ಗೋಕಟ್ಟೆ, ಚೆಕ್ ಡ್ಯಾಂ ಗಳಿಗೆ ಆಗಸ್ಟ್ ತಿಂಗಳಲ್ಲೂ ಹನಿ ನೀರು ಸಂಗ್ರಹ ವಾಗಿಲ್ಲ. ಅಂತರ್ಜಲ ಕುಸಿದಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಪರಿಣಾಮ ತಾಲ್ಲೂಕಿ ನಲ್ಲಿ 57 ಹಳ್ಳಿಗಳಲ್ಲಿ ಇಂದಿನವರೆಗೂ ಟ್ಯಾಂಕರ್ ನೀರು ಸರಬರಾಜು ಮುಂದುವರೆಸಲಾಗಿದೆ.

53 ಖಾಸಗಿಯವರ ಬೋರ್‌ಗಳನ್ನು ಪಡೆದು 35 ಹಳ್ಳಿಗಳಿಗೆ ನೀರನ್ನು ಪೂರೈಕೆ ಮಾಡಲಾಗಿದೆ. ಉಳಿದಂತೆ 57 ಹಳ್ಳಿಗಳಿಗೆ 92 ಟ್ಯಾಂಕರ್‌ಗಳಲ್ಲಿ 365 §ಟ್ರಿಪ್’ ನೀರನ್ನು ಪ್ರತಿದಿನ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ನೆರೆ ಹಾವಳಿ ಉಂಟಾಗಿದ್ದರೂ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅಂತರ್ಜಲ ಕುಸಿತ, ಬೋರ್‌ವೆಲ್‌ಗಳು ವಿಫಲವಾಗಿ ಬಹುತೇಕ §ಶುದ್ಧ ನೀರಿನ ಘಟಕಗಳು’ ಸ್ಥಗಿತಗೊಂಡಿವೆ.

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ತ್ವರಿತವಾಗಿ ಜಾರಿಯಾದರೆ ಮಾತ್ರ ಜಗಳೂರು ಕ್ಷೇತ್ರಕ್ಕೆ ಬರದಿಂದ ಶಾಶ್ವತ ಪರಿಹಾರ ಸಾಧ್ಯ. ಭದ್ರಾ ಮೇಲ್ದಂಡೆ ಯೋಜನೆ ಮತ್ತು 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನಕ್ಕೆ ಶಕ್ತಿ ಮೀರಿ ಶ್ರಮಿಸುವೆ

-ಎಸ್.ವಿ.ರಾಮಚಂದ್ರ, ಶಾಸಕ

ಗೋಶಾಲೆ ಮೇವು ವಿತರಣೆ ಆಬಾದಿತ : ಬರದ ಕಾರಣ ತಾಲ್ಲೂಕಿನಲ್ಲಿ ಕೊಣಚಕರ್, ಗುರುಸಿದ್ದೇಶ್ವರ ಮತ್ತು ಹಿರೇಮಲ್ಲನಹೊಳೆ ಗ್ರಾಮ ಗಳಲ್ಲಿ ಆರಂಭಿಸಲಾಗಿರುವ ಮೂರು ಗೋ ಶಾಲೆಗಳಲ್ಲಿ ಇಂದಿನವರೆಗೂ ಮೇವು ವಿತರಣೆ ನಿರಂತರ ವಾಗಿ ನಡೆದಿದೆ. ಪ್ರತಿಯೊಂದು ಗೋಶಾಲೆಯಲ್ಲಿ ಸರಾಸರಿ ಒಂದು ಸಾವಿರದಿಂದ ಎರಡು ಸಾವಿರ ರಾಸುಗಳಿಗೆ ಮೇವು ವಿತರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ನಿಯಮದಂತೆ ಮೂರು ತಿಂಗಳಿಗೆ ಅಂದರೆ ಆ.13ಕ್ಕೆ ಮುಚ್ಚಬೇಕಾಗಿತ್ತು. ಆದರೆ, ಹೈಕೋರ್ಟ್ ಆದೇಶದನ್ವಯ ಆಗಸ್ಟ್ 31 ರವರೆಗೂ ಗೋಶಾಲೆಗಳಲ್ಲಿ ಮೇವು ವಿತರಣೆ ಮುಂದುವರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಳೆ ಅಭಾವ ಬಿತ್ತನೆ ಕುಂಠಿತ : ತಾಲ್ಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಸರಾಸರಿ ಮಳೆ ಬಂದಿಲ್ಲ. ಬಿತ್ತನೆಗೆ ಅನುಕೂಲವಾಗಲು ಜೂನ್-ಜುಲೈ ತಿಂಗಳಲ್ಲಿ ಮಳೆ ಬರಬೇಕಾಗಿತ್ತು. ಆದರೆ, ಆಗಸ್ಟ್ ವೊದಲ ವಾರದಲ್ಲಿ ಸ್ವಲ್ಪ ಮಳೆ ಹೆಚ್ಚಾಗಿ ಬಂದಿದ್ದರೂ ವಾಡಿಕೆಗಿಂತ ಹೆಚ್ಚಾಗಿಲ್ಲ.

ಆಗಸ್ಟ್ 6 ರವರೆಗೆ ಕಸಬಾ ಹೋಬಳಿಯ ವಾಡಿಕೆ ಮಳೆ 225 ಎಂ.ಎಂ ವಾಸ್ತವಿಕ ಮಳೆಯಾಗಿರುವುದು 193 ಎಂ.ಎಂ. ಬಿಳಿಚೋಡು ಹೋಬಳಿ ವಾಡಿಕೆ ಮಳೆ 254 ಮಿ.ಮೀ ವಾಸ್ತವಿಕ 2.6 ಮಿ.ಮೀ ಕೊರತೆ 19 ಮಿ.ಮೀ, ಸೊಕ್ಕೆ ಹೋಬಳಿ 253ಕ್ಕೆ ಕೇವಲ 212 ಮಿ.ಮೀ ಮಳೆಯಾಗಿದ್ದು, 16 ಮಿ.ಮೀ ಕೊರತೆಯಾಗಿದೆ. ಒಟ್ಟಾರೆ ಸುಮಾರು 50 ಮಿ.ಮೀ ಮಳೆ ಕೊರತೆ ಉಂಟಾಗಿದೆ.

ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರ 24 ಸಾವಿರ ಹೆಕ್ಟೇರ್ ಈವರೆಗೆ ಬಿತ್ತನೆಯಾಗಿರುವುದು. ಕೇವಲ ಶೇ.72 ರಷ್ಟು ಅಂದರೆ, 39 ಸಾವಿರ ಹೆಕ್ಟೇರ್ ಮಾತ್ರ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಯಾಗಿಲ್ಲ. ರಾಗಿ, ಶೇಂಗಾ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಯಾಗಿಲ್ಲ.

ತೊಗರಿ ಬಿತ್ತನೆ ಕ್ಷೇತ್ರದ 3130 ಹೆಕ್ಟೇರ್ ಆದರೆ, ಈವರೆಗೆ ಬಿತ್ತನೆ ಆಗಿರುವುದು 821 ಹೆಕ್ಟೇರ್. ರಾಗಿ ಕ್ಷೇತ್ರ 4500 ಹೆಕ್ಟೇರ್ ಬಿತ್ತನೆ 754 ಹೆಕ್ಟೇರ್, ಹತ್ತಿ ಕೇವಲ 705 ಹೆಕ್ಟೇರ್ ಬಿತ್ತನೆ ಆಗಿದೆ. ಮೆಕ್ಕೆಜೋಳ 24482 ಹೆಕ್ಟೇರ್ ಗುರಿ ಮೀರಿ ಬಿತ್ತನೆ ಆಗಿದೆ.

ಆದರೆ, ಕಳೆದ ಮೂರು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿರುವ ತಾಲ್ಲೂಕು ಹಿಂಗಾರು ಮಳೆಗಳೂ ಬಾರದಿದ್ದರೆ ಕೆರೆ-ಗೋಕಟ್ಟೆಗಳಿಗೆ ನೀರು ಸಂಗ್ರಹವಾಗದಿದ್ದರೆ ಮುಂದಿನ ಬೇಸಿಗೆಗೂ ಕುಡಿಯುವ ನೀರಿಗಾಗಿ ಜನ ಪರಿತಪಿಸುವ ಆತಂಕ ಎದುರಾಗಿದೆ.