March 31, 2020

ಜನತಾ ಕರ್ಫ್ಯೂ : ನಿರ್ಗತಿಕರಿಗೆ ಊಟ ವಿತರಿಸಿ, ಹಸಿವು ನೀಗಿಸಿದ ಮೇಯರ್

ದಾವಣಗೆರೆ,ಮಾ.22- ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕರೆ ನೀಡಿದ್ದ ಜನತಾ ಕರ್ಫ್ಯೂ ಅನ್ನು ಯಶಸ್ವಿಯನ್ನಾಗಿಸಿದ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಪಕ್ಷ ಭೇದ ಮರೆತು ಪ್ರತಿಯೊಬ್ಬರೂ ಹೊರಗೆ ಬರದಂತೆ ತಮ್ಮ – ತಮ್ಮ ಮನೆಗಳಲ್ಲಿ ಇರುವುದರ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು, ಇದು ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ ಎಂದು ಮೇಯರ್ ಪ್ರತಿಕ್ರಿಯಿಸಿದ್ದಾರೆ.

ಜನತಾ ಕರ್ಫ್ಯೂ ಅನ್ನು ಯಶಸ್ವಿಯಾಗಿಸಿದ ಸಾರ್ವಜನಿಕರಿಗೆ ಬಿ.ಜಿ. ಅಜಯ್ ಕುಮಾರ್ ಕೃತಜ್ಞತೆ

ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷಕರು, ಸೈನಿಕರು, ಪೌರ ಕಾರ್ಮಿಕರು, ಪೊಲೀಸರು ಮತ್ತು ಮಾಧ್ಯಮದವರಿಗೆ ಜನರು ಚಪ್ಪಾಳೆ ತಟ್ಟುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದು, ಚಪ್ಪಾಳೆ ತಟ್ಟಿದ ಎಲ್ಲರಿಗೂ ಅಜಯ್ ಕುಮಾರ್ ಧನ್ಯವಾದ ಹೇಳಿದ್ದಾರೆ.

ನಿರ್ಗತಿಕರಿಗೆ ಊಟದ ವ್ಯವಸ್ಥೆ : ಜನತಾ ಕರ್ಫ್ಯೂ ಸಂದರ್ಭದಲ್ಲಿ ನಿರ್ಗತಿಕರಿಗೆ, ಭಿಕ್ಷುಕರಿಗೆ, ಅನಾಥರಿಗೆ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗದಂತೆ ಮೇಯರ್ ಅಜಯ್ ಕುಮಾರ್ ಅವರು ತಮ್ಮ ಸ್ವಂತ ಖರ್ಚಿನಿಂದ ಊಟದ ವ್ಯವಸ್ಥೆ ಮಾಡಿದ್ದರು.

ನಾಲ್ಕು ತಂಡಗಳನ್ನು ಮಾಡಿ, ವಾಹನಗಳ ಮೂಲಕ ಬಸ್ ನಿಲ್ದಾಣ, ಸಿ.ಜಿ. ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ದೇವಸ್ಥಾನ, ಫುಟ್ ಪಾತ್ ಮುಂತಾದ ಕಡೆಗಳಲ್ಲಿ ತೆರಳಿ, ಅಲ್ಲಿರುವ ನಿರ್ಗತಿಕರಿಗೆ ಊಟವನ್ನು ಸರಬರಾಜು  ಮಾಡಲಾಯಿತು. ಸ್ವತಃ ಮೇಯರ್ ಅಜಯ್ ಕುಮಾರ್ ಅವರು ತಮ್ಮ ತಂಡದೊಂದಿಗೆ ವಿವಿಧೆಡೆ ಹೋಗಿ ಊಟದ ಪೊಟ್ಟಣಗಳನ್ನು ವಿತರಿಸಿದರು.