September 18, 2019

ಜಗಳೂರು: ಬಗೆಹರಿಯದ ನೀರಿನ ಸಮಸ್ಯೆ

35 ಹಳ್ಳಿಗಳಿಗೆ ಟ್ಯಾಂಕರ್ ನೀರು

ಜಗಳೂರು : ಮಳೆಗಾಲ ಮುಗಿ ಯುತ್ತಾ ಬಂದರೂ ಸಹ ಕೆರೆ-ಗೋಕಟ್ಟೆಗಳಲ್ಲಿ ಹನಿ ನೀರು ಇಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ತಾಲ್ಲೂಕಿನ 35 ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದ್ದು, ಇಂದು ತಾ.ಪಂ. ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.

ತಾ.ಪಂ. ಅಧ್ಯಕ್ಷೆ ಶ್ರೀಮತಿ ಮಂಜುಳಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ದಯಾನಂದ ಸ್ವಾಮಿ ಅವರು ಪ್ರಗತಿ ವರದಿ ನೀಡಿದಾಗ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ್, ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಸಭೆ ಗಮನಕ್ಕೆ ತಂದರು.

35 ಹಳ್ಳಿಗಳಲ್ಲಿ 55 ಖಾಸಗಿ ಬೋರ್‌ಗಳಿಂದ ಪ್ರತಿ ನಿತ್ಯ 343 ಟ್ರಿಪ್ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಇಲ್ಲದೆ, ಅಂತರ್ಜಲ ಕೊರತೆಯಿಂದ ಬೋರ್‌ಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಒ ಸೂಚನೆ ನೀಡಿದರು.

ಅಧ್ಯಕ್ಷೆ ಮಂಜುಳಮ್ಮ, ಉಪಾಧ್ಯಕ್ಷ ಬಸವರಾಜಪ್ಪ, ನೀರಿನ ಕೊರತೆ ಉಂಟಾಗಿರುವ ಹಳ್ಳಿಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು. ತಾಲ್ಲೂಕಿನಲ್ಲಿ ಆರಂಭಿಸಲಾಗಿದ್ದ ಮೂರು ಗೋಶಾಲೆಗಳನ್ನು ತೆರವುಗೊಳಿಸಲಾಗಿದ್ದು, ಮೇವಿನ ಕೊರತೆ ಇಲ್ಲ. ತಾಲ್ಲೂಕಿನ 15 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಜಾನುವಾರುಗಳಿಗೆ ಕಾಲು ಬಾಯಿ ರೋಗದ ಚಿಕಿತ್ಸೆಗೆ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ|| ರಂಗಪ್ಪ ಪ್ರಗತಿ ವರದಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಬಸವರಾಜಪ್ಪ, ಪಶು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ವಿತರಿಸುತ್ತಿದ್ದು, ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ನನಗೆ ಅವಧಿ ಮೀರಿದ ಔಷಧಿ ನೀಡಿದ್ದಾರೆ. ಸಾಮಾನ್ಯ ರೈತರ ಜಾನುವಾರುಗಳ ಗತಿ ಏನು ಎಂದು ತರಾಟೆ ತೆಗೆದುಕೊಂಡರು.

ಅವಧಿ ಮೀರಿದ ಔಷಧಿಗಳನ್ನು ಆಸ್ಪತ್ರೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ ? ತಕ್ಷಣವೇ ಅವುಗಳನ್ನು ತೆರವುಗೊಳಿಸಿ, ಉತ್ತಮ ಔಷಧಿಗಳನ್ನು ನೀಡಿ, ಜಾನುವಾರುಗಳಿಗೆ ಚಿಕಿತ್ಸೆ ನೀಡಿ, ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಇಒ ಮಲ್ಲಾನಾಯ್ಕ ಡಾ|| ರಂಗಪ್ಪ ಅವರಿಗೆ ಸೂಚನೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ನಾಗರಾಜ್ ಪ್ರಗತಿ ವರದಿ ನೀಡಿ, ತಾಲ್ಲೂಕಿನ ಲಕ್ಕಂಪುರ, ಹನುಮವ್ವನಾಗ್ತಿಹಳ್ಳಿ ಮುಂತಾದ ಗ್ರಾಮಗಳಲ್ಲಿ ತೀವ್ರ ಜ್ವರ ಪ್ರಕರಣಗಳ ವರದಿಯಾಗಿದ್ದು, ಗ್ರಾಮಗಳಲ್ಲಿ §ಲಾರ್ವಾ’ ಸಮೀಕ್ಷೆ ನಡೆಸಿ, ಸ್ವಚ್ಛತೆ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗಿದೆ ಎಂದರು.

ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಇಲ್ಲ. ಚರಂಡಿಗಳು ಸ್ವಚ್ಛತೆಯಲ್ಲ. ಕಸದ ತಿಪ್ಪೆಗಳನ್ನು ಮನೆಗಳ ಸಮೀಪ ಹಾಕಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮಕೈಗೊಳ್ಳಲು ಪತ್ರ ಬರೆದಿದ್ದೇವೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಫೀಕ್ ಅಹಮ್ಮದ್, ಸಿಇಪಿಒ ಭಾರತಿ ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ್ ಮೂರ್ತಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ ಸೇರಿದಂತೆ, ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.

ಬಹುತೇಕ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದು, ನಿಯೋಜಿತ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ, ಪಿ.ಡಿ.ವೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Please follow and like us: