August 17, 2019

ಚಿಗಟೇರಿ : ಸಂಭ್ರಮದ ಶ್ರೀ ಶಿವನಾರದಮುನಿ ತೇರು

ಚಿಗಟೇರಿ : ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿಯ ಇತಿಹಾಸ ಪ್ರಸಿದ್ಧ ಶ್ರೀ ಶಿವನಾರದ ಮುನಿ ಸ್ವಾಮಿ ರಥೋತ್ಸವವು ಇಂದು ಸಡಗರ ಸಂಭ್ರಮದಿಂದ ಜರುಗಿತು. 

ಸಂಪ್ರದಾಯದಂತೆ ಪ್ರತಿ ವರ್ಷ ಚೈತ್ರ ಮಾಸದ ಕೃಷ್ಣ ಪಕ್ಷದ ಮೂಲ ನಕ್ಷತ್ರದಂದು ಶ್ರೀ ಸ್ವಾಮಿಯ ರಥೋತ್ಸವ ನೆರವೇರುವುದು. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಗದಗ ಮುಂತಾದ ಭಾಗಗಳಿಂದ ಆಗಮಿಸಿದ ಭಕ್ತರು `ಶ್ರೀ ಶಿವನಾರದಮುನಿ ಗೋವಿಂದಾ ಗೋವಿಂದಾ’ ಎಂಬ ನಾಮೋಚ್ಚರಣೆ ಮಾಡುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.

ಇಂದು ಬೆಳಗಿನಿಂದಲೇ ಆಗಮಿಸಿದ್ದ 60 ಬೆಡಗಿನ ಭಕ್ತರು ಹೊಸ ಮಡಕೆೆಯಲ್ಲಿ ಪ್ರತ್ಯೇಕವಾಗಿ ಮೀಸಲು ಅಕ್ಕಿ, ಹಾಲು, ಬೆಲ್ಲ, ಬಾಳೆ ಹಣ್ಣು ಮಿಶ್ರಣ ಮಾಡಿದ ಪ್ರಸಾದವನ್ನು ತಯಾರಿಸಿದರು.

ಸುಡುವ ಪ್ರಸಾದದ ಮಡಕೆ ಯನ್ನು ಹೆಗಲ ಮೇಲೆ ಹೊತ್ತು ಹರಕೆ ತೀರಿಸಿದರು. ಈ ಸಲ ಬಿಸಿಲ ತಾಪ ಹೆಚ್ಚಾಗಿದ್ದರೂ ಸಾಗರೋಪಾದಿಯಲ್ಲಿ ಆಗಮಿಸಿದ ಭಕ್ತರು ಭಕ್ತಿಯ ಹೊನಲನ್ನು ಹರಿಸಿದರು. ರಥೋತ್ಸವದ ಅಂಗವಾಗಿ ಆರೋಗ್ಯ ಇಲಾಖೆ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ದೇವಸ್ಥಾನ ಸಮಿತಿಯವರು ಮತ್ತು ಗ್ರಾಮಸ್ಥರು ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಶ್ರೀ ಶಿವನಾರದಮುನಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷರೂ ಆದ ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ ಸದಸ್ಯರಾದ ಬೇತೂರು ಕರಿಬಸಣ್ಣ, ಶಾಮನೂರು ಬಸಣ್ಣ, ಕಲ್ಪನಹಳ್ಳಿ ಬಸವಲಿಂಗಪ್ಪ, ಆವರಗೆರೆ ಈಶ್ವರಪ್ಪ, ಹೊಳಲ್ಕೆರೆ ವೇದಮೂರ್ತಿ ಉಪಸ್ಥಿತರಿದ್ದರು. ದೇವಾಲಯದ ವಾಸ್ತುಶಿಲ್ಪಿ, ಕೆ.ಜಿ. ಸುರೇಶ್, ಪತ್ರಕರ್ತ ನಾಗರಾಜ ಸಿರಿಗೆರೆ, ಭಾರತ್‌ ಸ್ಕೌಟ್ಸ್‌ ಗೈಡ್ಸ್‌ ಮಾಜಿ ಆಯುಕ್ತ ಕೆ.ಬಿ. ಷಣ್ಮುಖಪ್ಪ, ವಿಧಾನ ಪರಿಷತ್ತಿನ ಸದಸ್ಯ ಕೊಂಡಜ್ಜಿ ಮೋಹನ್‌, ಸಂಕೋಳ್ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

Please follow and like us: