ಗುರು, ಸಮರ್ಪಣೆ ನಮ್ಮ ಪರಂಪರೆ ಭಾಗ: ಮುತಾಲಿಕ್

ದಾವಣಗೆರೆ : ಸಮಾಜಕ್ಕೆ ಸಮರ್ಪಣೆ ಹಾಗೂ ಗುರು – ಶಿಷ್ಯ ಪದ್ಧತಿ ನಮ್ಮ ಪರಂಪರೆಯ ಭಾಗವಾಗಿದೆ. ಗುರು ಪರಂಪರೆಯ ಕಾರಣದಿಂದಾಗಿ ಭಾರತ ಬೆಳೆಯಲು ಸಾಧ್ಯವಾಗಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದ ವೈಷ್ಣವಿ ಚೇತನ ಶಾಲೆಯ ಆವರಣದಲ್ಲಿ ಶ್ರೀರಾಮ ಸೇನೆ ವತಿಯಿಂದ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಶ್ರೀರಾಮ ಸೇನೆ ಇದೇ ಮೊದಲ ಬಾರಿಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸಿದೆ. ಇನ್ನು ಮುಂದೆ ಪ್ರತಿ ವರ್ಷವೂ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಆರಂಭದ ದಿನಗಳಿಂದಲೂ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಆದರೆ, ಅಲ್ಲಿ ಗುರುವನ್ನು ವ್ಯಕ್ತಿಯಾಗಿ ಅಲ್ಲದೇ ಶಕ್ತಿಯಾಗಿ – ವಿಚಾರ ಕೇಂದ್ರಿತವಾಗಿ ಪರಿಗಣಿಸಲಾಗುತ್ತಿದೆ. ಹೀಗಾಗಿ ಆರ್‌ಎಸ್‌ಎಸ್‌ನ ಗುರು ಎಂದರೆ ವ್ಯಕ್ತಿಯಲ್ಲ, ತ್ಯಾಗದ ಪ್ರತೀಕವಾದ ಭಗವಾ ಧ್ವಜ ಎಂದು ಹೇಳಿದರು.

ಪಬ್ ದಾಳಿಗೆ ಅಮ್ಮನ ಧನ್ಯವಾದ

ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆ ನಡೆಸಿದ ದಾಳಿಗೆ ತೀವ್ರ ಟೀಕೆ ಎದುರಾಗಿತ್ತು. ಆದರೆ, ದಾಳಿಯಲ್ಲಿ ಹಲ್ಲೆಗೀಡಾದ ಯುವತಿಯ ಅಮ್ಮನೇ ನಾವು ಮಾಡಿದ ಕೆಲಸ ಸರಿ ಇದೆ ಎಂದು ಧನ್ಯವಾದ ಸಲ್ಲಿಸಿದ್ದರು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪಬ್‌ನಲ್ಲಿ ಅಶ್ಲೀಲ, ಅಸಭ್ಯ ಚಟುವಟಿಕೆ ನಡೆಯುತ್ತಿದೆ ಎಂದು ಸುತ್ತಲಿನವರು ಎರಡು ವರ್ಷಗಳಲ್ಲಿ 8 ದೂರು ಸಲ್ಲಿಸಿದ್ದರು. ಆದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಅದನ್ನು ತಡೆಯಲು ಶ್ರೀರಾಮ ಸೇನೆ ಹೋಗಿತ್ತು ಎಂದವರು ತಿಳಿಸಿದರು.

ಪಬ್‌ನಲ್ಲಿ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ತಪ್ಪಾಯಿತು. ಆದರೆ, ಅದೇ ಯುವತಿಯ ತಾಯಿ ನನಗೆ ಕರೆ ಮಾಡಿ, ನೀವು ಮಾಡಿದ ಕೆಲಸ ಸರಿ ಇದೆ. ನನ್ನ ಮಗಳು ಈ ರೀತಿ ಪಬ್‌ಗೆ ಹೋಗುತ್ತಾಳೆ ಎಂಬುದೇ ಗೊತ್ತಿರಲಿಲ್ಲ ಎಂದಿದ್ದರು ಎಂದು ಮುತಾಲಿಕ್ ಹೇಳಿದರು.

ವ್ಯಕ್ತಿಗಳಲ್ಲಿ ಸಮರ್ಪಣಾ ಭಾವ ಇರಬೇಕು. ದುಡಿದ ಪ್ರತಿ ನೂರು ರೂಪಾಯಿಗಳಲ್ಲಿ 10 ರೂ.ಗಳನ್ನು ಸಮಾಜಕ್ಕೆ ಅರ್ಪಿಸಬೇಕು. ಏಕೆಂದರೆ, ಪ್ರತಿ ವ್ಯಕ್ತಿಯ ಅಸ್ತಿತ್ವದ ಹಿಂದೆ ಸಮಾಜ ಇರುತ್ತದೆ. ಸಮಾಜವಿಲ್ಲದೇ ವ್ಯಕ್ತಿ ಇರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪಾಶ್ಚಾತ್ಯ ಸಂಸ್ಕೃತಿಯ ಛಾಯೆ ಹೆಚ್ಚಾಗುತ್ತಿರುವ ಬಗ್ಗೆ ವಿಷಾದಿಸಿದ ಮುತಾಲಿಕ್, ಬೆಳಕನ್ನು ಆರಿಸಿ ಜನ್ಮ ದಿನ ಆಚರಿಸುವುದು ಹಾಗೂ ಕುಣಿದು – ಕುಡಿದು ಹೊಸ ವರ್ಷ ಸ್ವಾಗತಿಸುವುದು ಭಾರತೀಯ ಪದ್ಧತಿ ಅಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚೇತನ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷೆ ವಿಜಯಲಕ್ಷ್ಮಿ ವೀರಮಾಚನೇನಿ, ಸೈನಿಕರಂತೆ ನಾವು ಗಡಿಯಲ್ಲಿ ಹೋರಾಡಲು ಸಾಧ್ಯವಾಗದಿದ್ದರೂ ಸಹ, ದೇಶಪ್ರೇಮವನ್ನು ಹೊರ ಹಾಕಲು ಸಾಕಷ್ಟು ದಾರಿಗಳಿವೆ. ಪ್ರತಿಯೊಬ್ಬರು ಕನಿಷ್ಠ 1 ರೂ. ಅನ್ನಾದರೂ ದೇಶದ ಸೈನಿಕರಿಗೆ ಸಲ್ಲಿಸುವುದೂ ಸಹ ದೇಶಪ್ರೇಮವಾಗುತ್ತದೆ. ಬ್ಯಾಂಕ್‌ಗಳೂ ಸಹ ಖಾತೆ ತೆರೆಯುವಾಗ ಇದಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಸಾಮಾಜಿಕ ಉದ್ದೇಶಕ್ಕಾಗಿ ಗೌರವ ಸಮರ್ಪಣಾ ದೇಣಿಗೆಯನ್ನು ಸ್ವೀಕರಿಸಲಾಯಿತು.

ವೇದಿಕೆಯ ಮೇಲೆ ಲಿಟಲ್ ಚಾಂಪ್ಸ್ ಗುರುಕುಲಂ ಸಂಸ್ಥಾಪಕ ವಿಜಯ್‌ಕುಮಾರ್, ಅರ್ಚಕ ಅನಿಲ್ ಶರ್ಮಾ, ಶ್ರೀರಾಮಸೇನೆಯ ಪರಶುರಾಮ್ ನಡುಮನಿ, ಹೆಚ್.ಸಿ. ಶ್ರೀಧರ್ ಪಾಟೀಲ್, ನೂತನ ಆಚಾರ್ಯ, ಡಿ.ಬಿ. ವಿನೋದ್‌ ರಾಜ್‌, ಕುಮಾರ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.