ಗಾಜಿನ ಮನೆಯಲ್ಲಿ ಮಾವಿನ ಮೇಳಕ್ಕೆ ಚಾಲನೆ

ಗ್ರಾಹಕರಿಗಾಗಿ ಕಾಯುತ್ತಿವೆ ರಾಸಾಯನಿಕ ರಹಿತ ಮಾವುಗಳು

ದಾವಣಗೆರೆ : ನಗರದ ಗಾಜಿನ ಮನೆಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಮಾವಿನ ಮೇಳಕ್ಕೆ ಚಾಲನೆ ನೀಡಲಾಗಿದೆ. ಮೇಳದಲ್ಲಿ ಸುಮಾರು 24 ಮಳಿಗೆಗಳಲ್ಲಿ ರೈತರು ಹಾಗೂ ರೈತರ ಉತ್ಪಾದಕ ಕಂಪನಿಗಳು ರಸಾಯನಿಕ ರಹಿತ ಮಾವುಗಳನ್ನು ಜನರಿಗೆ ನೇರವಾಗಿ ಮಾರಲಿದ್ದಾರೆ.

ಬಾದಾಮಿ, ದಶೆರಿ, ಮಲ್ಲಿಕಾ, ಮಲ್‌ಗೋವಾ, ರಸಪೂರಿ ಮುಂತಾದ ಹಣ್ಣುಗಳು ಹಾಪ್‌ಕಾಮ್ಸ್‌ ದರದ ಅನ್ವಯ ಕೆಜಿಗೆ 55 ರೂ.ಗಳಿಂದ 90 ರೂ.ಗಳವರೆಗೆ ಮಾರಾಟಕ್ಕೆ ಲಭ್ಯವಿವೆ.

ರಾಸಾಯನಿಕಗಳನ್ನು ಬೆರೆಸಿ ಕೃತಕವಾಗಿ ಮಾಗಿಸಿದ ಹಣ್ಣುಗಳು ಹೆಚ್ಚು ಹುಳಿಯಾಗಿರುತ್ತವಲ್ಲದೇ, ಆರೋಗ್ಯಕ್ಕೂ ಹಾನಿಕರ. ಅದೇ ಸಹಜವಾಗಿ ಹುಲ್ಲಿನಲ್ಲಿಟ್ಟು ಇಲ್ಲವೇ ಮಾಗಿಸುವ ಚೇಂಬರ್‌ನಲ್ಲಿ ಮಾಗಿಸಿದ ಹಣ್ಣುಗಳು ರುಚಿಯಾಗಿರುತ್ತವೆ, ಆರೋಗ್ಯಕ್ಕೂ ಹಾನಿಕರವಲ್ಲ ಎಂದು ಮೇಳದಲ್ಲಿ ಪಾಲ್ಗೊಂಡಿರುವ ರೈತರಾದ ರುದ್ರೇಶ್ ಹಾಗೂ ಸಿದ್ದೇಶ್ ತಿಳಿಸಿದ್ದಾರೆ.

ಹಣ್ಣು ಮಾಗಿಸುವ ಚೇಂಬರ್‌ ನಲ್ಲಿಟ್ಟು ಮಾವುಗಳನ್ನು ಮಾಗಿಸಲಾಗಿದೆ. ಈ ಚೇಂಬರ್‌ ಅನ್ನು ಸುಜಲ ವಾಟರ್‌ ಶೆಡ್‌ ಯೋಜನೆಯಡಿ ಉಚಿತವಾಗಿ ನೀಡಲಾಗಿದೆ. ಈ ರೀತಿ ಒಂದು ಟನ್ ಹಣ್ಣು ಮಾಗಿಸಲು ಕೇವಲ 50 ರೂ. ವೆಚ್ಚವಾಗುತ್ತದೆ ಎಂದು ಪಲ್ಲಾಗಟ್ಟೆಯ ರೈತ ಉತ್ಪಾದಕ ಕಂಪನಿಯ ರೈತರಾದ ರುದ್ರೇಶ್ ಹಾಗೂ ನರೇಶ್  ವಿವರಿಸಿದ್ದಾರೆ. ಬಾದಾಮಿ, ರಸಪುರಿ ಹಾಗೂ ಮಲಗೋವಾ ಹಣ್ಣುಗಳನ್ನು ಇವರು ಮಾರಾಟಕ್ಕಾಗಿ ತಂದಿದ್ದಾರೆ.

ಸಂತೇಬೆನ್ನೂರಿನ ದೊಡ್ಡಬ್ಬಿಗೆರೆಯ ರೈತರಾದ ಸಿದ್ದೇಶ್ ಅವರು ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದ ಹಣ್ಣನ್ನು ಭತ್ತದ ಹುಲ್ಲಿನಲ್ಲಿ ಮಾಗಿಸಿ ಮಾರಾಟಕ್ಕೆ ತಂದಿದ್ದಾರೆ.

ದೊಡ್ಡಬ್ಬಿಗೆರೆಯ ಚಮನ್ ಶರೀಫ್ ಅವರು ಬಾದಾಮಿ, ತೋತಾಪುರಿ, ಬೆನಿಶಾ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ. ತಮ್ಮದು 15 ಎಕರೆ ಜಮೀನಿದೆ. ಆದರೆ, ಮಳೆ ಕೈ ಕೊಟ್ಟಿದ್ದರಿಂದ ಬಹುತೇಕ ಬೆಳೆ ನಾಶವಾಗಿದೆ. ಈ ಬಾರಿ ಗೊಬ್ಬರ – ನೀರಿಗೆ ಮಾಡಿದ ಖರ್ಚು ಗಿಟ್ಟಿದರೆ ಸಾಕೆಂಬಂತಾಗಿದೆ ಎಂದಿದ್ದಾರೆ.

ಸಹಜವಾಗಿ ಮಾಗಿಸಿದ ಮಾವುಗಳಿಗಾಗಿ ಮೇಳ

ಗ್ರಾಹಕರಿಗೆ ರಾಸಾಯನಿಕ ರಹಿತ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಒದಗಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆ ಮತ್ತು ಮಾವು ಅಭಿವೃದ್ದಿ ನಿಗಮಗಳ ಸಂಯುಕ್ತಶ್ರಯದಲ್ಲಿ ಆಯೋಜಿಸಲಾಗಿದ್ದ ಮಾವು ಮೇಳವನ್ನು ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಮಾವಿನ ಬೆಳೆಗೆ ಅನುಕೂಲಕರ ವಾತಾವರಣ ಇದೆ. ಆದರೆ, ಮಳೆ ಕಡಿಮೆಯಾಗಿರುವುದರಿಂದ ಇಳುವರಿ ಕುಂಠಿತವಾಗಿದೆ. ಮುಂಬರುವ ದಿನಗಳಲ್ಲಿ ರೈತರಿಗಾಗಿ ಮಾವು ಬೆಳೆಯ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದವರು ಹೇಳಿದರು.

ಈಗಾಗಲೇ 24 ಸ್ಟಾಲ್‌ಗಳನ್ನು ತೆರೆಯಲಾಗಿದೆ. ಚಿತ್ರದುರ್ಗ, ಹಾವೇರಿ ರೈತರು ಆಗಮಿಸಲಿದ್ದು, ಅಪ್ಪೆ ಮಿಡಿಗೆ ಬಹಳ ಬೇಡಿಕೆ ಇದ್ದು ಅದರ ಸ್ಟಾಲ್‌ಗಳೂ ಬರಲಿವೆ. ಪ್ರತಿದಿನ ಎರಡರಿಂದ ಮೂರು ಸಾವಿರ ಜನರು ಬರುವ ನಿರೀಕ್ಷೆ ಇದೆ. ಜನರಿಗೆ ನೆರವಾಗಲು ನಗರ ಸಾರಿಗೆ ಬಸ್‌ಗಳಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆಗೂ ಕೋರಲಾಗಿದೆ  ಎಂದು ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನರ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಬಸವರಾಜೇಂದ್ರ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ  ಎಲ್. ಭೀಮಾನಾಯ್ಕ, ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನರ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್‌, ಕೃಷಿ ಸಹಕಾರ ಒಕ್ಕೂಟದ ಹನುಮಂತಪ್ಪ, ಮುಖಂಡರಾದ ಶಾಮನೂರು ಲಿಂಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ದೊಡ್ಡಬ್ಬಿಗೆರೆಯಲ್ಲಿ ಮಾವಿನ ಬೆಳೆ ಹೆಚ್ಚಾಗಿದೆ. ಇಲ್ಲಿನವರೇ 7-8 ಜನ ಇಲ್ಲಿ ಮಾರಾಟಕ್ಕೆ ಬಂದಿದ್ದೇವೆ ಎಂದು ಹೇಳಿರುವ ರೈತ ಫಿರೋಜ್ ಖಾನ್, ಸಿಂಧೂರ ಮಾವಿನ ಹಣ್ಣುಗಳು ತಿನ್ನಲು ಹಾಗೂ ರಸಾಯನ ಎರಡಕ್ಕೂ ರುಚಿಕರ ಎಂದು ತಾವು ಮಾರಾಟಕ್ಕೆ ತಂದಿರುವ ಹಣ್ಣಿನ ಬಗ್ಗೆ ಬಣ್ಣಿಸಿದರು.

ಇನ್ನೋರ್ವ ಯುವ ರೈತ ರೋಶನ್ ಅಹಮದ್ ಅವರು ತಮ್ಮ ಹೊಲದಲ್ಲಿ ಬೆಳೆದ ಅಡಿಕೆ ಮಾವು (ಶಕ್ಕರ್ ಗುಡ್ಲೆ)ಯನ್ನು ಮಾರಾಟಕ್ಕೆ ತಂದಿದ್ದಾರೆ. ತಮ್ಮ ಹೊಲದಲ್ಲಿ ಇಂತಹ ಒಂದೇ ಒಂದು ಮರ ಇದೆ. ಅಡಿಕೆ ಮಾವು ಗಾತ್ರದಲ್ಲಿ ಅಡಿಕೆಯನ್ನು ಹೋಲುತ್ತದೆ, ರುಚಿ ಬಹಳ ಸಿಹಿಯಾಗಿರುತ್ತದೆ ಎಂದರು.

ಇದೇ ವೇಳೆ ಕಲ್ಲು ಮಾವನ್ನು ಪ್ರದರ್ಶಿಸಿದ ಅವರು, ಈ ಮಾವು ಹಣ್ಣಾದ ಒಂದು ತಿಂಗಳು ಕಳೆದ ನಂತರವೂ ಕೆಡದೇ ಉಳಿಯುತ್ತದೆ. ಮೈ ನೋವು ನಿವಾರಣೆಗೆ ಇದು ಬಹಳ ಉಪಯುಕ್ತ ಎಂದು ಹೇಳಿದರು.

ಇವೆಲ್ಲಾ ಸವಿಯುವ ಹಣ್ಣಾದರೆ, ಕೇವಲ ನೋಡಲಿಕ್ಕಾಗಿ ನಾನಾ ರೀತಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇದರಲ್ಲಿ ಐಶೈರ್ಯ, ಸಕ್ಕರೆ ಗೋಲಿಲ್ನಾಟಿ, ಶಕ್ಕರ್‌ಗೋಲಾ, ಬಾಳೆಮಾವು, ಲಾಲ್‌ಖಾತ್ರ, ಕಾಲಾಪಾಡ, ಇಮಾಮ್‌ಪಸಂದ್‌, ಅರ್ಕ ಪುನೀತ್‌, ಅರ್ಕಾ ಅರುಣಾ ಮುಂತಾದವು ಸೇರಿವೆ.

ಮೇ 23ರವರೆಗೆ ಮಾವಿನ ಮೇಳ ನಡೆಯಲಿದೆ. ಗಾಜಿನ ಮನೆಯ ನೋಟದ ಜೊತೆಗೆ ಮಾವಿನ ಸವಿ ಸವಿಯಲೊಮ್ಮೆ ಇತ್ತ ಕಡೆ ಹೆಜ್ಜೆ ಹಾಕುವುವುದನ್ನು ಮರೆಯದಿರಿ.