December 6, 2019

ಗಾಜಿನ ಮನೆಗೆ 26 ಸಾವಿರ ಜನ ಭೇಟಿ

ಫಲ ಪುಷ್ಪ ಪ್ರದರ್ಶನಕ್ಕೆ ಕಳೆದ ಬಾರಿಯಷ್ಟು ಸಿಗದ ಜನಾಕರ್ಷಣೆ

ದಾವಣಗೆರೆ, ಆ. 27 – ಮಳೆಯ ಛಾಯೆ ಹಾಗೂ `ಅಕಾಲಿಕ’ ಆಯೋಜನೆಯ ಕಾರಣದಿಂದಾಗಿ ಗಾಜಿನ ಮನೆಯ ಫಲಪುಷ್ಪ ಪ್ರದರ್ಶನ ನಿರೀಕ್ಷೆಯ ಮಟ್ಟಕ್ಕೆ ಜನರನ್ನು ಸೆಳೆಯಲು ಸಾಧ್ಯವಾಗಿಲ್ಲ.

ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಫಲಪುಷ್ಪ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿತ್ತು. ಆದರೆ, ಧಾರಾಕಾರ ಮಳೆ ಸುರಿದು ಈ ಯೋಜನೆಯ ಮೇಲೆ ತಣ್ಣೀರು ಎರಚಿದಂತಾಗಿತ್ತು. ನಂತರ ಫಲಪುಷ್ಪ ಪ್ರದರ್ಶನವನ್ನು ಆ.23ರಿಂದ 27ರವರೆಗೆ ಆಯೋಜಿಸಲಾಗಿತ್ತು.

ವಾರಾಂತ್ಯದ ದಿನದಂದು ಹೆಚ್ಚಾಗಿ ಜನರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುತ್ತಾರೆ. ಆದರೆ, ಈ ಬಾರಿ ಶನಿವಾರದಂದು ಚದುರಿದ ಮಳೆ ಕಾರಣದಿಂದಾಗಿ ಗಾಜಿನ ಮನೆ ಪ್ರದರ್ಶನಕ್ಕೆ ಆಗಮಿಸಲು ಜನ ಹೆಚ್ಚು ಆಸಕ್ತಿ ತೋರಲಿಲ್ಲ. ಭಾನುವಾರದಂದು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿದ್ದರು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೋಮ್ಮನ್ನರ್ ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನದ ವೇಳೆ ರೈತಾಪಿ ಹಾಗೂ ನಗರದ ಜನತೆಯನ್ನು ದೃಷ್ಟಿಯಲ್ಲಿಕೊಂಡು ಸ್ಟಾಲ್‌ಗಳನ್ನು ಅಳವಡಿಸುತ್ತೇವೆ. ಆದರೆ, ರೈತರಿಗೆ ಅಗತ್ಯ ನೆರವನ್ನು ಕಲ್ಪಿಸಲು ನಿರಂತರ ಅವಕಾಶವಿರುವುದರಿಂದ, ಈ ಬಾರಿ ನಗರದ ಜನತೆಗೆ ಹೆಚ್ಚಿನ ಒತ್ತು ಕೊಟ್ಟು ಪ್ರದರ್ಶನ ಆಯೋಜಿಸಿದ್ದೆವು. ಪ್ರದರ್ಶನ ಮುಂದೂಡಲ್ಪಟ್ಟದ್ದು ತೊಡಕಾಯಿತು ಎಂದವರು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ಆದ್ಯತೆ ನೀಡಲಿ
ಗಾಜಿನ ಮನೆಗೆ ನಗರದ ಜನತೆ ಸಾಮಾನ್ಯವಾಗಿ ಸಂಜೆ ವೇಳೆ ಹೆಚ್ಚಾಗಿ ಆಗಮಿಸುತ್ತಾರೆ. ಒತ್ತಡಗಳ ಕಾರಣದಿಂದಾಗಿ ಮಕ್ಕಳನ್ನು ಕರೆದುಕೊಂಡು ಬರಲು ಎಷ್ಟೋ ಪೋಷಕರಿಗೆ ಸಾಧ್ಯವಾಗುವುದಿಲ್ಲ.ಹೀಗಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸುವಾಗ ಶಾಲೆಗಳ ಜೊತೆಗೂ ತೋಟಗಾರಿಕಾ ಇಲಾಖೆ ಕೈ ಜೋಡಿಸಿದರೆ ಮಕ್ಕಳು ವೀಕ್ಷಿಸಲು ಅನು ಕೂಲವಾಗುತ್ತದೆ.  ಮಕ್ಕಳು ಫಲಪುಷ್ಪ ಪ್ರದರ್ಶನ ವೀಕ್ಷಿಸುವುದಷ್ಟೇ ಅಲ್ಲದೇ, ಸಸ್ಯಗಳ ಕುರಿತು ನೇರ ವಾಗಿ ಮಾಹಿತಿ ಪಡೆಯಲು ಅವಕಾಶ ಮಾಡಿ ಕೊಟ್ಟರೆ ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ಸಿಗಲಿದೆ. ಓದಿನ ಏಕತಾನತೆಯಿಂದ ಹೊರ ಬಂದು ಗಾಜಿನ ಮನೆಯಲ್ಲಿ ವಿಹರಿಸುವುದು ಮಕ್ಕಳಿಗೆ ಹೊಸ ಅನುಭವವನ್ನೂ ನೀಡಲಿದೆ.

ಕಳೆದ ಗಣರಾಜ್ಯೋತ್ಸವದ ವೇಳೆ ಹತ್ತು ದಿನಗಳ ಕಾಲ ಪ್ರದರ್ಶನ ಆಯೋಜಿಸಲಾಗಿತ್ತು. ಹೆಚ್ಚು ರಜಾ ದಿನಗಳು ದೊರೆತಿದ್ದರಿಂದ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಆದರೆ, ಈ ಬಾರಿ ರಜಾ ದಿನಗಳ ಕೊರತೆಯಿಂದಾಗಿ 25-26 ಸಾವಿರ ಜನ ಮಾತ್ರ ಪ್ರದರ್ಶನಕ್ಕೆ ಆಗಮಿಸಿದ್ದಾರೆ ಎಂದವರು ತಿಳಿಸಿದರು.

ಭಾನುವಾರದಂದು ಅತಿ ಹೆಚ್ಚಿನ 15 ಸಾವಿರ ಜನ ಗಾಜಿನ ಮನೆಗೆ ಆಗಮಿಸಿದ್ದರು. ಉಳಿದ ದಿನಗಳಲ್ಲಿ ಎರಡರಿಂದ ಮೂರು ಸಾವಿರದವರೆಗೆ ಜನರು ಭೇಟಿ ನೀಡಿದ್ದರು ಎಂದವರು ಹೇಳಿದ್ದಾರೆ.

ಸ್ಟಾಲ್‌ಗಳಿಗೆ ತೊಡಕು : ಈ ಬಾರಿ ಸ್ಟಾಲ್‌ಗಳನ್ನು ಗಾಜಿನ ಮನೆಯ ಆವರಣದಲ್ಲಿರುವ ತೋಟಗಾರಿಕಾ ಕಚೇರಿ ಬಳಿ ಆಯೋಜಿಸಲಾಗಿತ್ತು. ಆದರೆ, ಅಲ್ಲಿನ ಸ್ಟಾಲ್‌ಗಳು ಜನರಿಗೆ ಕಾಣುತ್ತಲೇ ಇರಲಿಲ್ಲ. ಮೊದಲ ದಿನದ ನಂತರ ಕೆಲ ತಿಂಡಿ ತಿನಿಸಿನ ಸ್ಟಾಲ್‌ಗಳು ಗಾಜಿನ ಮನೆ ಹಿಂಭಾಗಕ್ಕೆ ರವಾನೆಯಾಗಿದ್ದು ಕಂಡು ಬಂತು.

ಕಳೆದ ಬಾರಿ ರೇಷ್ಮೆ ಇಲಾಖೆಯ ಸ್ಟಾಲ್‌ಗೆ ಸಾಕಷ್ಟು ಜನರು ಬಂದಿದ್ದರು. ಈ ಬಾರಿ ಸ್ಟಾಲ್‌ಗೆ ಭೇಟಿ ನೀಡಿದವರ ಸಂಖ್ಯೆ ತೀರಾ ಕಡಿಮೆ ಎಂದು ಇಲಾಖೆಯ ಉದ್ಯೋಗಿ ಜಯಮ್ಮ ತಿಳಿಸಿದರು.

ಬಾಡಿದ ಹೂವುಗಳು : ಕೊನೆಯ ದಿನದ ವೇಳೆಗೆ ಪ್ರದರ್ಶನದಲ್ಲಿದ್ದ ಹೂವುಗಳು ಬಾಡುತ್ತಾ ಬಂದಿದ್ದವು. ತರಕಾರಿ ಪ್ರದರ್ಶನ ಭಾಗ ಖಾಲಿ ಆಗಿತ್ತು. ಇಕೆಬಾನಾದ ಹೂವುಗಳು ಕಳೆಗುಂದಿದ್ದವು.  ಇದನ್ನೆಲ್ಲ ನೋಡಿದ ಕೆಲವರು, ಮೊದಲ ದಿನವೇ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದುದೂ ಕಂಡು ಬಂತು.