ಗಾಂಧೀಜಿ-ಶಾಸ್ತ್ರೀಜಿ ಆದರ್ಶ ಅನುಕರಣೀಯ

ಶಾಸಕ ರವೀಂದ್ರನಾಥ್‌ ಅಭಿಮತ

ದಾವಣಗೆರೆ, ಅ.2- ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಇಬ್ಬರು ಮಹಾಪುರುಷರ ಆದರ್ಶ ಅನುಕರಣೀಯ ಎಂದು ಶಾಸಕ ಎಸ್.ಎ. ರವೀಂದ್ರನಾಥ್‌ ಅಭಿಪ್ರಾಯಪಟ್ಟರು. 

ಅವರು ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸೆ ಮತ್ತು ಸತ್ಯ ಮಾರ್ಗದಿಂದಲೇ ಶ್ರಮಿಸಿದರು. ದೇಶಕ್ಕೆ ಆಹಾರ ಕೊರತೆಯಾದಾಗ ಅಂದು ಪ್ರಧಾನಿಯಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ಪ್ರತಿಯೊಬ್ಬರೂ ವಾರಕ್ಕೆ ಒಂದು ದಿನ ಉಪವಾಸವಿದ್ದು ಆಹಾರ ಪದಾರ್ಥವನ್ನು ಮಿತವಾಗಿ ಬಳಸಬೇಕೆಂದು ಕರೆ ನೀಡಿದ್ದರು ಎಂದು ಸ್ಮರಿಸಿದರು. 

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕ ಪ್ರೊ. ಲಿಂಗಪ್ಪ, ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾದ ಶ್ರೀಮತಿ ಶೈಲಜ ಬಸವರಾಜ್‌, ಜಿಲ್ಲಾಧಿಕಾರಿ ಮಹಂತೇಶ್‌ ಬೀಳಗಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್‌ ಸದಸ್ಯ ಬಸವಂತಪ್ಪ, ನಗರಪಾಲಿಕೆ ಆಯುಕ್ತರಾದ ಮಂಜುನಾಥ ಬಳ್ಳಾರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅರುಣಕುಮಾರಿ ಬಿರಾದಾರ್ ಮತ್ತಿತರರು ಆಗಮಿಸಿದ್ದರು. 

ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯವರು ಹೊರತಂದಿರುವ `ಬಾಪು-ಪಾಪು’ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಪ್ರಾರ್ಥನಾ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಯಿತು. 

ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕದ ಸೌಲಭ್ಯ ನೀಡಲಾಯಿತು. ಗಾಂಧೀಜಿಯವರಿಗೆ ಪ್ರಿಯವಾದ ಚರಕಾವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ನಗರ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಅವರು ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡುವ ಪಣವನ್ನು ಪ್ರತಿಯೊಬ್ಬರೂ ತೊಡ ಬೇಕೆಂದು ಹೇಳಿದರು. ಅಜಯ ನಾರಾಯಣ ಪ್ರಾರ್ಥಿಸಿದರು. ಉಪವಿಭಾಗಾಧಿಕಾರಿ ಕುಮಾರಸ್ವಾಮಿ ವಂದಿಸಿದರು.