September 18, 2019

ಕುಂಚದಿಂದ ಸಮಾಜದ ವಾಸ್ತವತೆ ಚಿತ್ರಿತವಾಗಲಿ

ದೃಶ್ಯಕಲಾ ಮಹಾವಿದ್ಯಾಲಯದ ಸಮೂಹ ಚಿತ್ರಕಲಾ ಪ್ರದರ್ಶನ ಸಮಾರಂಭದಲ್ಲಿ ಕುಲಸಚಿವ ಪ್ರೊ. ಪಿ. ಕಣ್ಣನ್

ಕಲಾವಿದರು ನಿಮ್ಮಲ್ಲಿರುವ ಕೌಶಲ್ಯವನ್ನು  ಬಳಸಿಕೊಂಡು ಸಮಾಜದ ಏರುಪೇರು, ಸತ್ಯ ಸಂಗತಿಗಳನ್ನು ಚಿತ್ರಿಸುವ ಮೂಲಕ ಸಮಾಜದ ವಾಸ್ತವತೆಯನ್ನು ತೆರೆದಿಡಿ ಎಂದು ಯುವ ಚಿತ್ರಕಲಾವಿದರಿಗೆ  ದಾವಣಗೆರೆ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಪಿ. ಕಣ್ಣನ್ ಕರೆ ನೀಡಿದರು.

ಅವರು ಇಂದು ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ ಆವರಣದಲ್ಲಿರುವ `ದೃಶ್ಯವಿಶ್ವ ಕಲಾಗ್ಯಾಲರಿ’ ಯಲ್ಲಿ ಚಿತ್ರಕಲಾ ವಿಭಾಗದ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನ `ನೈನ್ ಎಕ್ಸಪ್ರೆಷನ್ಸ್’ಅನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲೆಗೆ ಹಲವಾರು ವ್ಯಾಖ್ಯಾನಗಳಿವೆ. ವ್ಯಾಖ್ಯಾನ ನೀಡಿದವರು ಕಲಾವಿದರಲ್ಲ ಎಂಬುದು ಗಮನಾರ್ಹ. ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ಬೇರೆ ಬೇರೆ ಉದ್ದೇಶವಿರುತ್ತದೆ. ಯಾರೋ ಒಬ್ಬರು ಮಾಡುತ್ತಾರೆ. ಅದನ್ನೇ ಅನುಸರಿಸೋಣ ಎಂಬುದು ತಪ್ಪು. ಯೂರೋಫಿಯನ್ನರಿಗೆ ಮೊನಾಲಿಸಾ ಬೇಕು. ಕಾರಣ ಅವರದು ಹೊಟ್ಟೆ ತುಂಬಿದ ಸಮಾಜ. ಐಷಾರಾಮಿ ಜೀವನವುಳ್ಳ ಅವರು  ಸುಂದರ ಕಲಾಕೃತಿಗಳ
ಆರಾಧಕರಾಗಿದ್ದರು.

ಆದರೆ ನಮ್ಮ ಸಮಾಜಕ್ಕೆ ಮೊನಾಲಿಸಾ ಅಂತಹ ಕೃತಿಯ ಅಗತ್ಯಕ್ಕಿಂತ ಇಲ್ಲಿಯ ನೈಜ ಜೀವನವನ್ನು ಕಟ್ಟಿಕೊಡುವಂತಹ, ಎಲ್ಲರ ಕಣ್ಣನ್ನು ತೆರೆಸುವಂತಹ ಸಮಾಜದ ವಾಸ್ತವತೆಯ ಚಿತ್ರಣಗಳನ್ನು ಕಲಾವಿದರು ಚಿತ್ರಿಸಬೇಕಿದೆ. ವಿದೇಶಿ ಪರಿಕಲ್ಪನೆ ಎನ್ನುವುದು ಮೋಡಿ ಮಾಡುವ ಕಲೆಯಾಗಿದೆ. ಅದರಂತೆ ನಾವು ಬಾಳಲು ಸಾಧ್ಯವಿಲ್ಲ. ಎಂಬ ಅರಿವು ನಮ್ಮ ಯುವಕಲಾವಿದರಿಗೆ ಇರಬೇಕು ಎಂದರು.

ಕಲ್ಪನೆಯೊಂದೇ ಕಲೆಯ ತತ್ವವಲ್ಲ: ಕಲಾವಿದನಾದವನಿಗೆ ಕಲ್ಪನಾ ಶಕ್ತಿ ಇರಬೇಕು. ಆದರೆ ಕಲ್ಪನೆಯೊಂದೇ ಕಲೆಯ ತತ್ವವಲ್ಲ. ಇಲ್ಲದಿರುವುದನ್ನು ಕಲ್ಪನೆ ಮಾಡದೆ, ಇರುವುದನ್ನು ಕಲ್ಪಿಸಿದರೆ ಅದು ಕಲೆಯಾಗಲಿದೆ. `ಎಕ್ಸ್​ಕ್ಲೂಸಿವ್ ಇಮ್ಯಾಜಿನೇಷನ್ ಆರ್ಟ್’ ಎನ್ನುವುದು ಅಪಾಯಕಾರಿ. ಅದು ಸೋಮಾರಿತನವಾಗಿದೆ. ಇದಕ್ಕಿಂತ ಸಮಾಜವನ್ನು ಉತ್ತಮ ಪಡಿಸುವ ಕಲ್ಪನೆ ಅತ್ಯಗತ್ಯವಾಗಿದೆ ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆ ಚಿತ್ರಕಲಾವಿದನಾದವನಿಗೆ ಕಡ್ಡಾಯವಾಗಿ ಇರಬೇಕು. ನಿಮ್ಮ ಕಲಾ ಕೌಶಲ್ಯವನ್ನು ಸಮಾಜಕ್ಕೆ ಕೊಡುಗೆ ನೀಡಲು ಬಳಸಿಕೊಳ್ಳಿರಿ ಎಂದು ಅತ್ಯುತ್ತಮ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ವಿವಿ ಕಲಾನಿಕಾಯದ ಡೀನ್ ಡಾ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ನಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಚಿತ್ರಕಲೆಗಿದೆ.  ಕಲೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆರ್ಯ, ದ್ರಾವಿಡ ಹಾಗೂ ಹರಪ್ಪ ಮತ್ತು ಮೊಹಿಂಜೋದಾರೋ ಕಾಲದ ಚಿತ್ರಕಲೆಗಳನ್ನು ವೀಕ್ಷಿಸಿದಾಗ ಆ ಕಾಲದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ತಿಳಿಸಿಕೊಡುತ್ತದೆ. ಕೆಲವೊಂದು  ಚಿತ್ರಕಲೆಗಳು ನಮ್ಮನ್ನು ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವ ಮೂಲಕ ಚಿತ್ರಕಲೆಯ ಮಹತ್ವವನ್ನು ತಿಳಿಸಿದರು.

ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ರವೀಂದ್ರ ಎಸ್. ಕಮ್ಮಾರ್ ಮಾತನಾಡಿದರು. ವಿದ್ಯಾರ್ಥಿನಿ ಹೇಮಲತಾ ಪ್ರಾರ್ಥಿಸಿದರು. ಚಿತ್ರಕಲಾ ವಿಭಾಗದ ಮುಖ್ಯಸ್ಥ ಡಾ. ಸತೀಶ್ ವಲ್ಲೇಪುರೆ ಸ್ವಾಗತಿಸಿದರು. ಶಿವಶಂಕರ್ ಸುತಾರ್ ವಂದಿಸಿದರು.

Please follow and like us: