August 17, 2019

ಕಾಂಗ್ರೆಸ್ ಅಭ್ಯರ್ಥಿಯ ಬದಲಾವಣೆ

ದಾವಣಗೆರೆಯಿಂದ ಮಲ್ಲಿಕಾರ್ಜುನ್‌ ಸ್ಪರ್ಧೆ

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಒಲವು ತೋರದ ಹಿನ್ನೆಲೆಯಲ್ಲಿ, ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಕಣಕ್ಕಿಳಿಯಲಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಶಿವಶಂಕರಪ್ಪನವರಿಗೆ ಹೈಕಮಾಂಡ್ ಟಿಕೆಟ್ ಪ್ರಕಟಿಸಿತ್ತು. ಆದರೆ, ಈ ಪ್ರಕಟಣೆ ಸ್ವತಃ ಶಾಮನೂರು ಶಿವಶಂಕರಪ್ಪ ನವರಿಗೇ ಆಶ್ಚರ್ಯವಾಗಿತ್ತು. ವಯೋಮಾನದ ಕಾರಣದಿಂದಾಗಿ ಸ್ಪರ್ಧಿ ಸಲು ಆಸಕ್ತಿ ಇಲ್ಲ ಎಂದು ಹೈಕಮಾಂಡ್ ಪ್ರಸ್ತಾ ಪವನ್ನು ಅವರು ಸಮ್ಮತಿಸಲು ನಿರಾ ಕರಿಸಿದ್ದರು.

ಕಾರಣ, ಪಕ್ಷದ ರಾಜ್ಯ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿ, ಅಂತಿಮವಾಗಿ ಮಲ್ಲಿಕಾರ್ಜುನ್ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ. ಇದಕ್ಕೂ ಮುಂಚೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಅವರ ಹೆಸರುಗಳನ್ನೂ ಸಹ ರಾಜ್ಯ ನಾಯಕರು ಪರಿಶೀಲಿಸಿದ್ದರು. 

ಈ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಭಯರಿಗೆ ಆಹ್ವಾನ ನೀಡಿದ್ದರು. ಇವರ ಜೊತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಕೊಂಡಜ್ಜಿ ಬಸಪ್ಪ ಅವರ ಮೊಮ್ಮಗ ನಿಖಿಲ್ ಕೊಂಡಜ್ಜಿ, ಎಂ.ಟಿ. ಸುಭಾಶ್ಚಂದ್ರ ಅವರ ಹೆಸರುಗಳೂ ಕೇಳಿ ಬಂದಿದ್ದವು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ್, ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ. ನಂತರ ಪಕ್ಷದ ರಾಜ್ಯ ನಾಯಕರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ.

ಸುದೀರ್ಘ ಚರ್ಚೆಯ ನಂತರ ಮಲ್ಲಿಕಾರ್ಜುನ್ ಅವರ ಹೆಸರಿಗೆ ರಾಜ್ಯ ಕಾಂಗ್ರೆಸ್ ಅನುಮೋದನೆ ನೀಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಪ್ರಕಟಿಸಿದ್ದರಿಂದ, ಬಿ-ಫಾರಂ ಅನ್ನು ಮಲ್ಲಿಕಾರ್ಜುನ್ ಅವರಿಗೆ ನೀಡುವ ಪ್ರಸ್ತಾಪವನ್ನು ದೆಹಲಿಗೆ ರವಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Please follow and like us: