ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ಕ್ರಮ: ಎಸ್ಪಿ

ದಾವಣಗೆರೆ : ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್ಚು ಜನಸಂದಣಿ ಇರುವ ಸುಮಾರು 300 ಸ್ಥಳಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಅಳವಡಿಸಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಕಾಯ್ದೆ ಅನ್ವಯ ಜಿಲ್ಲೆಯ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿಟಿವಿ ಹಾಗೂ ಇತರೆ ಸುರಕ್ಷತಾ ಉಪಕರಣಗಳ ಅಳವಡಿಕೆ ಮಾಡಬೇಕಿದೆ. ಈ ಪೈಕಿ ಈಗಾಗಲೇ 75ರಲ್ಲಿ ಅಳವಡಿಕೆ ಪೂರ್ಣಗೊಂಡಿದೆ ಎಂದು ಹೇಳಿದರು.

ಗುರುತು ಖಚಿತವಿಲ್ಲದೇ ವಸತಿ ಕಲ್ಪಿಸಬೇಡಿ

ಲಾಡ್ಜ್, ಹೋಟೆಲ್‌ಗಳಷ್ಟೇ ಅಲ್ಲದೇ ಉಚಿತ ಸೇವೆ ನೀಡುವ ಧಾರ್ಮಿಕ ಸ್ಥಳಗಳೂ ಸಹ, ಗುರುತು ಖಚಿತ ಮಾಡಿಕೊಳ್ಳದೇ ವಸತಿ ಕಲ್ಪಿಸುವುದು ನಿಯಮಗಳ ಉಲ್ಲಂಘನೆ ಎಂದು ಎಸ್‌ಪಿ ಆರ್. ಚೇತನ್ ತಿಳಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ವಸತಿ ಕಲ್ಪಿಸುವಾಗ ಎಚ್ಚರಿಕೆ ವಹಿಸಬೇಕಿದೆ. ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರವೇ ವಸತಿ ಕಲ್ಪಿಸಬೇಕು. ಅದರಲ್ಲೂ ವಿದೇಶಿಯರು ಬಂದಾಗ ಆ ಬಗ್ಗೆ ಆನ್‌ಲೈನ್‌ ಪೋರ್ಟಲ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬೇಕು. ಆನ್‌ಲೈನ್‌ ಸೌಲಭ್ಯ ಇಲ್ಲದಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದವರು ಹೇಳಿದರು.

ಸಂಬಂಧಿಸಿದ ವೃತ್ತ ನಿರೀಕ್ಷಕರ ಮೂಲಕ ಸಿಸಿಟಿವಿ ಅಳವಡಿಕೆ ಬಗ್ಗೆ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಜನವರಿ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿತ್ತು. ಈಗ ಸಿಸಿಟಿವಿ ಅಳವಡಿಕೆ ಪರಿಶೀಲನೆಗೆ ಚುರುಕು ನೀಡಲಾಗುತ್ತಿದೆ ಎಂದು ಹೇಳಿದರು.

ಕೆಲವರು ಇಂತಹ ಗುಣಮಟ್ಟದ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದ ಅವರು, ಕಾಯ್ದೆಯ ಪ್ರಕಾರ 100ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುವ ಹಾಗೂ 500ಕ್ಕೂ ಹೆಚ್ಚು ಜನರು ಭೇಟಿ ನೀಡುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದೆ. ಇದನ್ನು ಪಾಲಿಸದಿದ್ದರೆ 5,000 ರೂ. ದಂಡ ವಿಧಿಸಲಾಗುವುದು. ಆನಂತರವೂ ಅಳವಡಿಕೆ ಆಗದಿದ್ದರೆ ಸಂಸ್ಥೆಗಳ ಅನುಮತಿ ರದ್ದುಗೊಳಿಸಲಾಗುವುದು ಎಂದವರು ಎಚ್ಚರಿಸಿದರು.

ಸಿಸಿಟಿವಿ ಗುಣಮಟ್ಟ ಉತ್ತಮ ವಾಗಿರಬೇಕು. 50 ಗಜಗಳವರೆಗಿನ ದೃಶ್ಯಗಳು ಅದರಲ್ಲಿ ದಾಖಲಾಗ ಬೇಕು, 24×7 ವಿಡಿಯೋ ಚಿತ್ರೀಕರಣವಾಗಬೇಕು, ಕತ್ತಲಲ್ಲೂ ಕ್ಯಾಮರಾ ಕಾರ್ಯನಿರ್ವಹಿಸು ವಂತಿರಬೇಕು, 30 ದಿನಗಳವರೆಗಿನ ವಿಡಿಯೋಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಬೇಕು.

ಸಿಸಿಟಿವಿ ಅಳವಡಿಕೆ ಬಗ್ಗೆ ಪರಿಶೀಲಿಸಲು ಈಗಾಗಲೇ ಒಂದು ತಂಡವನ್ನು ರಚಿಸಿದ್ದೇವೆ. ನಿಯಮಗಳ ಅನ್ವಯ ಸಿಸಿಟಿವಿ ಅಳವಡಿಸಿಕೊಳ್ಳಲು ಒಂದು ತಿಂಗಳ ಗಡುವು ನೀಡಿದ್ದೇವೆ. ನಂತರವೂ ಅಳವಡಿಕೆ ಮಾಡಿಕೊಳ್ಳದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.