August 17, 2019

ಐದು ವರ್ಷಗಳಲ್ಲಿ ಋಣ ತೀರಿಸಿ ಮನೆಗೆ ಹೋಗುತ್ತೇನೆ : ಸಂಸದ ಸಿದ್ದೇಶ್ವರ

ದಾವಣಗೆರೆ : ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ, 2024ರ ಒಳಗೆ ಕ್ಷೇತ್ರದಲ್ಲಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ  5 ವರ್ಷ ಶ್ರಮಿಸಿ ಕಾರ್ಯಕರ್ತರ ಋಣ ತೀರಿಸಿ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು, ದಾವಣಗೆರೆ ನಗರಕ್ಕೆ 24 ಗಂಟೆ ಕಾಲ ನೀರು ಪೂರೈಸವ ಜಲಸಿರಿ ಯೋಜನೆ, ಅಶೋಕ ಟಾಕೀಸ್ ಬಳಿಯ ಮೇಲ್ಸೇತುವೆ, ರೈಲ್ವೆ ಕೆಳ ಸೇತುವೆಗಳ ಅಭಿವೃದ್ಧಿ, ಎಥೆನಾಲ್ ಹಾಗೂ ರಸಗೊಬ್ಬರ ಘಟಕಗಳ ಸ್ಥಾಪನೆ, ಸಿ.ಆರ್.ಸಿ. ಕೇಂದ್ರ ಸ್ಥಾಪನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುವುದಾಗಿ ಅವರು ಹೇಳಿದರು.

ತಮ್ಮ ಪ್ರಯತ್ನದಿಂದ ಈಗಾಗಲೇ ಹಲವಾರು ಯೋಜನೆಗಳು ಕ್ಷೇತ್ರಕ್ಕೆ ಬಂದಿವೆ. ಆದರೆ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಸಹಕಾರವಿಲ್ಲದೇ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಕಠಿಣವಾಗುತ್ತಿದೆ. ರಾಜ್ಯ ಸರ್ಕಾರಗಳೂ ಸಹ ಕೈ ಜೋಡಿಸಿದಾಗ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯ ಎಂದವರು ಹೇಳಿದರು.

ಸ್ಮಾರ್ಟ್ ಗೊಂದಲ : ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಲವಾರು ಗೊಂದಲಗಳಿವೆ. ಕೆಲವು ಯೋಜನೆಗಳು ಸರಿಪಡಿಸಲಾಗದಷ್ಟು ಕೆಟ್ಟು ಹೋಗಿವೆ. ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರುವ ಹೊಣೆಯನ್ನು ಅಧಿಕಾರಿಗಳು, ಖಾಸಗಿ ಸಂಸ್ಥೆ ಹಾಗೂ ಪಾಲಿಕೆಗೆ ನೀಡಲಾಗಿದೆ. ಇದರಲ್ಲಿ ನಾನೂ ಸಹ ಸದಸ್ಯ ನಾಗಿಲ್ಲ ಎಂದವರು ತಿಳಿಸಿದರು.

ದೆಹಲಿಗೆ ಹೋಗಿ ದಾವಣಗೆರೆ ಮರೆಯಬೇಡಿ ; ಸಿದ್ದೇಶ್ವರ ಜನಪರ ಕೆಲಸ ಮಾಡಲು ರವೀಂದ್ರನಾಥ್‌ ಕಿವಿಮಾತು 

ಸಂಸದ ಸಿದ್ದೇಶ್ವರ ಅವರಿಗೆ ಸಂಸಾರದ ಬಗ್ಗೆ ಚಿಂತೆಗಳಿಲ್ಲ. ಅವರಿಗೆ ಎಲ್ಲ ರೀತಿಯ ಅನುಕೂಲಗಳಿವೆ. ಮಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. ಈಗೇನಪ್ಪ ಅಂದರೆ ಸಿದ್ದೇಶ್ವರ ಜನರ ಪರವಾಗಿ ಕೆಲಸಗಳನ್ನು ಮಾಡಬೇಕಿದೆ ಎಂದು ರವೀಂದ್ರನಾಥ್‌ ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸಂಸದರು ರೈತರ ಪರವಾಗಿ ಕೆಲಸ ಮಾಡುವುದರ ಅಗತ್ಯವನ್ನು ಒತ್ತಿ ಹೇಳಿದ ರವೀಂದ್ರನಾಥ್, ದೆಹಲಿಗೆ ಹೋಗಿ ದಾವಣಗೆರೆ ಮರೆಯಬೇಡಿ ಎಂದೂ ವೇದಿಕೆಯ ಮೇಲಿದ್ದ ಸಿದ್ದೇಶ್ವರ್‌ಗೆ ನಗುತ್ತಲೇ ಹೇಳಿದರು. ಇದು ಚಟಾಕಿಯೋ ಅಥವಾ ಚಾಟಿಯೋ ಸ್ಪಷ್ಟವಾಗಲಿಲ್ಲ.

ಕೇಂದ್ರದಲ್ಲೀಗ ನಮ್ಮದೇ ಸರ್ಕಾರ ಇದೆ. ಸ್ಪಷ್ಟ ಬಹುಮತ ಹಾಗೂ ಶಕ್ತಿ ಇದೆ. ಆದರೆ, ರೈತರಿಗೆ ಸರ್ಕಾರ ಏನೂ ಮಾಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನು ನಿವಾರಿಸಬೇಕಾದರೆ ರಾಜ್ಯದ 25 ಬಿಜೆಪಿ ಸಂಸದರು ರೈತರ ಪರವಾಗಿ ಕೇಂದ್ರದಲ್ಲಿ  ಶ್ರಮಿಸಬೇಕಿದೆ ಎಂದು ರವೀಂದ್ರನಾಥ್ ಹೇಳಿದರು.

ಭತ್ತ ಬೆಳೆಯುವ ವೆಚ್ಚ ಹೆಚ್ಚಾಗಿದ್ದರೆ, ಇಳುವರಿಗೆ ಬೆಲೆ ಕಡಿಮೆಯಾಗಿದೆ. ಈ ಹಿಂದೆ 1977-78ರಲ್ಲಿ ಕೇಂದ್ರ ಸರ್ಕಾರ ಎಫ್.ಸಿ.ಐ. ಮೂಲಕ ನೇರವಾಗಿ ರೈತರ ಇಳುವರಿ ಖರೀದಿ ಮಾಡಿತ್ತು. ಈಗಲೂ ಸಹ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡರೆ ರೈತರಿಗೆ ನೆರವಾಗುತ್ತದೆ ಎಂದು ತಿಳಿಸಿದರು.

ರವೀಂದ್ರನಾಥ್‌ ತಮ್ಮ ಮಾತುಗಳನ್ನು ಮುಗಿಸಿದ ನಂತರ ಸಿದ್ದೇಶ್ವರ ಅವರ ಜೊತೆ ಒಂದೆರಡು ನಿಮಿಷ ಮಾತನಾಡಿದರು. 

ನಂತರ ತಮ್ಮ ಸರದಿ ಬಂದಾಗ ಮಾತನಾಡಿದ ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಅವರಿಗೆ ಸಂಸದರಾಗಬೇಕೆಂಬ ಬಹಳ ಆಸೆ ಇದೆ. ಅವರು ಮುಂದಿನ ಬಾರಿ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗುವ ಮೂಲಕ ರೈತರ ಕಷ್ಟ ನಿವಾರಿಸಲಿ ಎಂದು ಹೇಳಿದ್ದು ಆಸಕ್ತಿಕರವಾಗಿತ್ತು.

ಇದನ್ನೆಲ್ಲಾ ಸರಿಪಡಿಸಬೇಕಾದರೆ ಬಿಜೆಪಿ ನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನಾವು ಅಂದುಕೊಂಡ ರೀತಿಯಲ್ಲಿ ಜಾರಿಗೆ ತರಲು ಸಾಧ್ಯ ಎಂದು ಹೇಳಿದರು.

ಜನರದ್ದೇ ತಪ್ಪು : ಕೇಂದ್ರ ಸರ್ಕಾರದಿಂದ ಹಿಡಿದು ಗ್ರಾಮ ಪಂಚಾಯ್ತಿಯವರೆಗೆ ಹಲವು ಹಂತಗಳಲ್ಲಿ ಯೋಜನೆಗಳು ಜಾರಿಗೆ ಬರುತ್ತವೆ. ಈ ಎಲ್ಲಾ ಹಂತಗಳಲ್ಲಿ ಯೋಜನೆ ಜಾರಿಗೆ ತರುವವರು ಬೇರೆ ಬೇರೆಯವರು. ಮೊನ್ನೆಯಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ಬಿಜೆಪಿಗೆ ಮತ ಹಾಕಿದರು. ಆದರೆ, ಹರಿಹರ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ಹೀಗೆ ಬೇರೆ ಬೇರೆ ಹಂತಗಳಲ್ಲಿ ಬೇರೆಯವರನ್ನು ಆಯ್ಕೆ ಮಾಡುತ್ತಿರುವುದು ಜನಗಳ ತಪ್ಪು ಎಂದು ಸಿದ್ದೇಶ್ವರ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ರಾಜ್ಯ ಸರ್ಕಾರ ಕೇವಲ ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಸೀಮಿತವಾಗಿದೆ. ಮೈತ್ರಿ ಸರ್ಕಾರ ಕೇವಲ ಮೂರು ಜಿಲ್ಲೆಗಳ ಸರ್ಕಾರವಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸ್ಥಾನಗಳು ಬಂದಿವೆ. ಅದೇ ವೇಳೆ, ನಮ್ಮ ನಿರೀಕ್ಷೆಯಂತೆ ಕೆಲಸ ಮಾಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಜನ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ದೊರೆತಿದೆ. ಅದರಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಲೀಡ್ ದೊರೆತಿದೆ. ಪಾಲಿಕೆ ಚುನಾವಣೆಯಲ್ಲೂ ಇದೇ ರೀತಿ ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮಾಜಿ ಶಾಸಕರಾದ ಬಸವರಾಜನಾಯ್ಕ, ಗುರುಸಿದ್ದನಗೌಡ ಮತ್ತಿತರರು ಉಪಸ್ಥಿತರಿದ್ದರು.

ರಮೇಶ್ ನಾಯ್ಕ ಸ್ವಾಗತಿಸಿದರೆ, ಕಡ್ಲೇಬಾಳು ಧನಂಜಯ್ ನಿರೂಪಿಸಿದರು.

Please follow and like us: