August 17, 2019

ಎಸಿಬಿ ಬಲೆಗೆ ಲೈಸೆನ್ಸ್‌-ರಹದಾರಿ ಸರ್ವೇಯರ್‌ಗಳು

ದಾವಣಗೆರೆ : ಲಂಚ ಸ್ವೀಕರಿಸುತ್ತಿದ್ದ  ಆರೋಪದಲ್ಲಿ ಲೈಸೆನ್ಸ್ ಸರ್ವೇಯರ್ ಹಾಗೂ ರಹದಾರಿ ಸರ್ವೇಯರ್ ಇಬ್ಬರೂ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಇಂದು ಸಿಕ್ಕಿ ಬಿದಿದ್ದಾರೆ.

ಜಮೀನಿನ ಸರ್ವೇ ನಕ್ಷೆಯನ್ನು ಎಸ್ಎಸ್ಎಸ್ಎಲ್ಆರ್ ಮೋಜಿಣಿ ಗಣಕ ಯಂತ್ರದಲ್ಲಿ ಅಳವಡಿಸಲು ಚನ್ನಗಿರಿ ತಾಲ್ಲೂಕಿನ ಲೈಸೆನ್ಸ್ ಸರ್ವೇಯರ್ ಕೆ.ಓ. ಶಿವಕುಮಾರ್ ಹಾಗೂ ಚನ್ನಗಿರಿ ತಾಲ್ಲೂಕಿನ ಕರಿಲಕ್ಕೇನಹಳ್ಳಿ ರಹದಾರಿ ಸರ್ವೆಯರ್ ಕೆ.ಪಿ. ಪ್ರವೀಣ್ ಕುಂಬಾರ್ 8 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿರುವುದಾಗಿ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಎಲ್.ಜಿ. ಅರುಣ್ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳದ ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಿ.ಎ. ಜಗದೀಶ, ಪೊಲೀಸ್ ಉಪಾಧೀಕ್ಷಕ ಹೆಚ್.ಎಸ್. ಪರಮೇಶ್ವರ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಬಿ. ನಾಗಪ್ಪ, ಕೆ.ಪಿ. ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ಉಮೇಶ್, ಮಾರುತಿ, ವೀರೇಶಪ್ಪ, ಕಲ್ಲೇಶಪ್ಪ, ಮೋಹನ್‍ಕುಮಾರ್, ಧನರಾಜ್ ತಂಡ ನಡೆಸಿದ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ. 

ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳ ಜೊತೆಗೆ ಲಂಚದ ಹಣವನ್ನು ವಶಪಡಿಸಿಕೊಂಡ ಎಸಿಬಿ ತಂಡವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.

Please follow and like us: