ಎಲ್ಲೆಡೆ ಪ್ರವಾಹ : ಈ ವರ್ಷವೂ ಕೊಮಾರನಹಳ್ಳಿ ಕೆರೆ ಖಾಲಿ ಖಾಲಿ

ಜಿಗಳಿ ಪ್ರಕಾಶ್

ಮಲೇಬೆನ್ನೂರು, ಆ. 12 – ಕಳೆದ ಒಂದು ವಾರ ಸತತವಾಗಿ ಸುರಿದ ಮಹಾಮಳೆಯಿಂದಾಗಿ ರಾಜ್ಯದಲ್ಲಿ ನದಿಗಳು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭದ್ರಾ ಕಾಲುವೆ ಪಕ್ಕದಲ್ಲೇ ಇರುವ ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ಕೆರೆ ನೀರಿಲ್ಲದೇ ಬಣಗುಡುತ್ತಿದೆ.

ಈ ಹಿಂದೆಲ್ಲಾ ಮಳೆ ನೀರಿನಿಂದಲೇ ತುಂಬಿಕೊಳ್ಳುತ್ತಿದ್ದ ಈ ಕೆರೆ ಕಳೆದ 10 ವರ್ಷಗಳಿಂದ ನೀರಿನ ಒಳಹರಿವು ಇಲ್ಲದ ಕಾರಣ ಉತ್ತಮ ಮಳೆಯಾದರೂ ಕೆರೆ ಮಾತ್ರ ಭರ್ತಿಯಾಗಿಲ್ಲ. ಕಳೆದ ವರ್ಷವೂ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿ ಎಲ್ಲಾ ಜಲಾಶಯ, ಕೆರೆ ಕಟ್ಟೆಗಳು ಭರ್ತಿಯಾದಾಗಲೂ ಈ ಕೆರೆ ಮಾತ್ರ ಭರ್ತಿ ಆಗುವುದಿರಲಿ, ಅರ್ಧದಷ್ಟು ನೀರೂ ಹರಿದು ಬಂದಿರಲಿಲ್ಲ.

ಕೆರೆಯ ಹಿಂಭಾಗದಲ್ಲಿ ಮಳೆ ಆದ ಸಂದರ್ಭದಲ್ಲಿ ನೀರು ಹರಿದು ಬರುವ ಜಾಗಗಳಲ್ಲಿ ಚೆಕ್ ಡ್ಯಾಂ ಕಟ್ಟಿರುವುದು ಮತ್ತು ಕೆರೆಯ ಸುತ್ತಲೂ ತೋಟಗಳನ್ನು ಮಾಡಿರುವ ಕಾರಣದಿಂದಾಗಿ ಕೆರೆಗೆ ನೀರು ಹರಿದು ಬರುತ್ತಿಲ್ಲ ಎಂದು ಹೇಳಲಾಗಿದೆ.

ಜೊತೆಗೆ ಈ ಭಾಗದ ಕೆರೆ ತುಂಬುವಂತಹ ದೊಡ್ಡ ಮಳೆಗಳು ಆಗುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಸುಮಾರು 86 ಎಕರೆ ವಿಸ್ತೀರ್ಣವಿರುವ ಈ ಕೆರೆಯ ದಡದಲ್ಲಿಯೇ ಹಗರಿಬೊಮ್ಮನಹಳ್ಳಿ -ಶಿವಮೊಗ್ಗ ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ಮತ್ತು ಸುತ್ತಲಿನ ಗುಡ್ಡ-ಕಾಡು, ತೋಟಗಳು ಇರುವುದರಿಂದ ಇದೊಂದು ಪ್ರವಾಸಿ ತಾಣವೂ ಆಗಿದೆ.

ಈ ಕೆರೆಗೆ ತುಂಗಭದ್ರಾ ನದಿಯಿಂದ ಪೈಪ್ ಲೈನ್ ಮೂಲಕ ನೀರು ತಂದು ತುಂಬಿಸಬೇಕೆಂಬ ಯೋಜನೆ ಮಂಜೂರಾತಿಗಾಗಿ ಶಾಸಕ ಎಸ್. ರಾಮಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್ ಅವರು ಕಳೆದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮತ್ತು ಈ ಅವಧಿಯ ಸಮ್ಮಿಶ್ರ ಸರ್ಕಾರದಲ್ಲಿ ನಿರಂತರ ಪ್ರಯತ್ನ ಪಟ್ಟರೂ ಕರ್ನಾಟಕ ನೀರಾವರಿ ನಿಗಮದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ.

ಇದಕ್ಕೂ ಮೊದಲು ಡಿಪಿಆರ್ ಕೂಡಾ ಮಾಡಿಸಿ, ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಪುಟ್ಟರಾಜು ಅವರಿಗೆ ಶಾಸಕ ರಾಮಪ್ಪನವರು ಮನವಿ ಸಲ್ಲಿಸಿದ್ದರು.

ಆದರೆ ಅನುದಾನ ಕೊರತೆಯಿಂದಾಗಿ ಯೋಜನೆ ವಿಳಂಬವಾಗಬಹುದೆಂಬ ಉದ್ದೇಶದಿಂದ ಜಲ ಸಂಪನ್ಮೂಲ ಇಲಾಖೆ ಮುಖಾಂತರ ಹೊಸ ಡಿಪಿಆರ್ ಮಾಡಿಸಿ, ಮಂಜೂರಾತಿಗಾಗಿ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹಾಕಿದ್ದರು.

ಕೆರೆಗಳ ಭರ್ತಿಗೆ ಜಿಲ್ಲಾಡಳಿತ ಮುಂದಾಗಲಿ 

ಮಹಾಮಳೆಯಿಂದಾಗಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಮತ್ತು ಭದ್ರಾ ಜಲಾಶಯವೂ ಭರ್ತಿಯಾಗುವ ಹಂತದಲ್ಲಿರುವುದರಿಂದ ಐತಿಹಾಸಿಕ ಸೂಳೆಕೆರೆ ಮತ್ತು ಕೊಂಡಜ್ಜಿ ಕೆರೆ ಸೇರಿದಂತೆ 22 ಕೆರೆಗಳಿಗೂ ನೀರು ತುಂಬಿಸಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಬೇಸಿಗೆ ಸಮಯದಲ್ಲಿ ಹೆಚ್ಚು ಅನುಕೂಲವಾಗಲಿದೆ ಮತ್ತು ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂಬುದು ಜಿಲ್ಲೆಯ ಜನತೆಯ ಮನವಿಯಾಗಿದೆ.

ಇದಕ್ಕಿಂತ ಮುಖ್ಯವಾಗಿದ್ದ ಮಹತ್ವಾಕಾಂಕ್ಷೆಯ ಭೈರನಪಾದ ಏತ ನೀರಾವರಿ ಯೋಜನೆಗೆ ಸಮ್ಮಿಶ್ರ ಸರ್ಕಾರ ಕೊನೆಯ ಕ್ಷಣದಲ್ಲಿ ಅನುಮೋದನೆ ನೀಡಿತು.

ಇದರ ಜೊತೆಗೇ ಇದ್ದ ಕೊಮಾರನಹಳ್ಳಿ ಕೆರೆ ಯೋಜನೆಗೆ ಅನುಮೋದನೆ ನೀಡದಿರುವುದು ತೀವ್ರ ಬೇಸರ ತಂದಿತು.

ಕೆರೆ ಅಭಿವೃದ್ಧಿಪಡಿಸಿ, ತುಂಗಭದ್ರಾ ನದಿಯಿಂದ ನೀರು ಹರಿಸಿ, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸುವ ಈ ಯೋಜನೆ ಜಾರಿಗೊಳಿಸಬೇಕೆಂಬುದು ನಮ್ಮ ಸಂಕಲ್ಪವಾಗಿದ್ದು, ಅದಕ್ಕಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್ `ಜನತಾವಾಣಿ’ಗೆ ತಿಳಿಸಿದರು.

ಜೊತೆಗೆ ಹೆಚ್.ಎಸ್. ಶಿವಶಂಕರ್ ಕೂಡಾ ಶಾಸಕರಾಗಿದ್ದ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದರು. ಆದರೆ ಅವರಿಗೆ ಆಗಿನ ಸರ್ಕಾರದ ಸ್ಪಂದನೆ ಸಿಗಲಿಲ್ಲ.

ಹೆಚ್. ಶಿವಪ್ಪನವರು ಶಾಸಕರಾಗಿದ್ದ ಸಂದರ್ಭದಲ್ಲಿ ಭದ್ರಾ ಕಾಲುವೆಯಿಂದ ಪಂಪ್ ಸೆಟ್ ಮೂಲಕ ಈ ಕೆರೆಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ವಿದ್ಯುತ್ ಬಿಲ್ ಪಾವತಿಸುವುದು ಸಮಸ್ಯೆ ಆದ ಕಾರಣ ಅದು ಯಶಸ್ವಿಯಾಗಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಅದೇನೇ ಇರಲಿ ಜಿಲ್ಲಾಡಳಿತ ಈ ಕೂಡಲೇ ಭದ್ರಾ ಕಾಲುವೆಯಿಂದ ತಾತ್ಕಾಲಿಕವಾಗಿ ಕೆರೆಗೆ ನೀರು ತುಂಬಿಸಲು ಮುಂದಾಗಬೇಕು.

ಆ ಮೂಲಕ ಬೇಸಿಗೆ ಕಾಲದಲ್ಲಿ ಜನ ಜಾನು ವಾರುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೆರವಾಗ ಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಜಂಗಲ್ ತೆರವು : ಮಳೆಗಾಲ ಆಗಿರುವುದರಿಂದ ಕೆರೆಗೆ ನೀರು ಬರಲಿದೆ ಎಂಬ ವಿಶ್ವಾಸದಿಂದ ಕೆರೆ ಬಳಕೆದಾರರ ಸಂಘದ ವತಿಯಿಂದ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ  ಇತ್ತೀಚೆಗೆ ಕೆರೆಯಲ್ಲಿದ್ದ ಜಾಲಿ ಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ್ದಾರೆ.