ದಾವಣಗೆರೆ : ಸರ್ಕಾರದ ಆದೇಶದಂತೆ ಐದು ಅಡಿಗಿಂತ ಎತ್ತರ ವಿರುವ ಗಣೇಶನ ವಿಗ್ರಹಗಳನ್ನು ಕೂರಿಸಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಹೇಳಿಕೆಗೆ ನಗರದ ಸಂಘ-ಸಂಸ್ಥೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಾಮಾನ್ಯವಾಗಿ ನಗರದಲ್ಲಿ ಬೀದಿ ಬದಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಅದ್ಧೂರಿಯಾಗಿ ಕೂರಿಸುವ ಗಣೇಶನ ವಿಗ್ರಹಗಳು ಐದು ಅಡಿಗಿಂತ ಹೆಚ್ಚಿನದಾಗಿಯೇ ಇರುತ್ತವೆ. ಗಣೇಶನ ವಿಗ್ರಹಗಳು ಹೀಗೆಯೇ ಇರಬೇಕೆಂದು ಬಯಸಿ, ಆರ್ಡರ್ ಕೊಟ್ಟು ಮಾಡಿಸಿ, ಹಬ್ಬದ ಸಿದ್ಧತೆಯಲ್ಲಿ ತೊಡಗಿರುವವರು ಏನು ಮಾಡಬೇಕೆಂದು ದಿಕ್ಕುತೋಚದಂತಾಗಿದ್ದಾರೆ.
ಈಗಾಗಲೇ ಸಂಭ್ರಮದ ಗಣೇಶ ಚತುರ್ಥಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕಳೆದ ಎರಡು ಮೂರು ತಿಂಗಳ ಮೊದಲೇ ಗಣೇಶನ ವಿಗ್ರಹಕ್ಕೆ ಆರ್ಡರ್ ಕೊಟ್ಟಿದ್ದೇವೆ. ಆದರೆ ಇದೀಗ ಜಿಲ್ಲಾಧಿಕಾರಿಗಳ ಹೇಳಿಕೆ ಆತಂಕ ಮೂಡಿಸಿದೆ ಎಂದು ಹಿಂದೂ ಸಂಘಟನೆಯ ಮುಖಂಡರೊಬ್ಬರು ಹೇಳಿದ್ದಾರೆ.
ಗಣೇಶನ ವಿಗ್ರಹಗಳು ಐದು ಅಡಿಗಿಂತ ಎತ್ತರವಿದ್ದರೆ ಅನುಮತಿ ನೀಡಬಾರದೆಂಬ ಸರ್ಕಾರದ ಆದೇಶವನ್ನಷ್ಟೇ ನಾನು ತಿಳಿಸಿದ್ದೇನೆ. ಸರ್ಕಾರದ ಆದೇಶ ಕೇವಲ ದಾವಣಗೆರೆ ಜಿಲ್ಲೆಗಷ್ಟೇ ಇಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ. – ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ಗಣೇಶನ ವಿಗ್ರಹ ಮಾರಾಟಗಾರರೂ ಸಹ ಜಿಲ್ಲಾಧಿಕಾರಿಗಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಏಳೆಂಟು ತಿಂಗಳಿನಿಂದ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ಅದರಲ್ಲಿ ಐದು ಅಡಿಗಿಂತ ಹೆಚ್ಚಿನ ವಿಗ್ರಹಗಳನ್ನೂ ತಯಾರಿಸಿದ್ದೇವೆ. ಆದರೆ ದಿಢೀರ್ ಈ ರೀತಿಯ ತೀರ್ಮಾನ ಕೈಗೊಂಡರೆ ಹೇಗೆ? ನಮ್ಮ ವಿಗ್ರಹಗಳನ್ನು ಖರೀದಿಸುವವರಾರು? ಸಾಕಷ್ಟು ಶ್ರಮ ವಹಿಸಿ, ಖರ್ಚು ಮಾಡಿ ತಯಾರಿಸಿದ ವಿಗ್ರಹಗಳನ್ನು ಏನು ಮಾಡಬೇಕು? ಎಂದು ಗಣೇಶನ ಮೂರ್ತಿ ತಯಾರಕರು ಪ್ರಶ್ನಿಸುತ್ತಿದ್ದಾರೆ.
ಇತ್ತ ಭಾರೀ ಅದ್ದೂರಿಯಾಗಿ ಕೂರಿಸುವ ನಗರದ ಕೆಲವು ಸಂಘಟನೆಗಳು ಜಿಲ್ಲಾಧಿಕಾರಿಗಳ ಹೇಳಿಕೆಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮವರೇ ಜನಪ್ರತಿನಿಧಿಗಳಿದ್ದಾರೆ. ಅವರು ದೊಡ್ಡ ವಿಗ್ರಹ ಕೂರಿಸಲು ಅವಕಾಶ ಕೊಡಿಸುತ್ತಾರೆ ಎಂಬ ಆಶಾಭಾವನೆಯಲ್ಲಿದ್ದಾರೆ.
ನಿಷೇಧ ಏಕೆ?
ಐದು ಅಡಿಗಿಂತ ಹೆಚ್ಚು ಎತ್ತರದ ಮೂರ್ತಿ ತಯಾರಿಸಲು 100 ಕೆಜಿಗೂ ಅಧಿಕ ಮಣ್ಣು ಬೇಕಾಗುತ್ತದೆ. ಎತ್ತರವಿರುವ ಮೂರ್ತಿಗಳು ಭಾರವಾಗಿದ್ದು, ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುತ್ತವೆ. ವಿಸರ್ಜನೆಗೆ, ವಿಲೇವಾರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಾಲಿನ್ಯ ಮಂಡಳಿ ನಿರ್ಬಂಧ ವಿಧಿಸಿದೆ.