April 20, 2019

ಎಂ.ಪಿ.ಪ್ರಕಾಶ್ ಕುಟುಂಬದ ಜನಸೇವೆ ನಿಲ್ಲದಿರಲಿ

ಹರಪನಹಳ್ಳಿ : ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರು ಹೈ.ಕ. ಸೌಲಭ್ಯ ಶೀಘ್ರ ಈಡೇರದಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಮುಂದಾಗಿದ್ದರು. ಆಗ ಸರ್ಕಾರ ಇವರ ಬೇಡಿಕೆಗೆ ಮಣಿದು ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸುವ ಜನರ ಆಶೋತ್ತರಕ್ಕೆ ಸ್ಪಂದಿಸಿತ್ತು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್ ಹೇಳಿದರು.

ದಿ.ಎಂ.ಪಿ.ರವೀಂದ್ರ ಅವರ 50ನೇ ಜನ್ಮ ದಿನೋತ್ಸವದ ಅಂಗವಾಗಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ವಿಧಾನಸಭೆಯಲ್ಲಿ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಿದ ಫಲವಾಗಿ ಹರಪನಹಳ್ಳಿ ತಾಲ್ಲೂಕು ಸಂವಿಧಾನದ 371ಜೆ ಸೌಲಭ್ಯ ಪಡೆದುಕೊಳ್ಳುತ್ತಿದೆ. ಹೀಗೆ ಜನರ ಹೋರಾಟದ ಜತೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯೂ ಬೇಕಾಗುತ್ತದೆ. ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸೌಲಭ್ಯದ ಪ್ರಮುಖ ರುವಾರಿಗಳಾದ ವೈಜನಾಥ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ಭಾಗದ ಜನತೆ ನೆನೆಯಲೇಬೇಕು. ಹಾಗೆಯೇ ಹರಪನಹಳ್ಳಿ ಜನತೆ ಕೂಡ ಈ ಇಬ್ಬರ ನಾಯಕರ ಜತೆ ಎಂ.ಪಿ.ರವೀಂದ್ರ ಅವರನ್ನು ಸ್ಮರಿಸಬೇಕು. ಹರಪನಹಳ್ಳಿ ಬಳ್ಳಾರಿಯ ಒಂದು ಭಾಗವಾಗಿದ್ದರಿಂದ ಸೇರ್ಪಡೆ ವಿಷಯದಲ್ಲಿ ಹೈ.ಕ ಭಾಗದ ರಾಜಕಾರಣಿಗಳು ಜನರು ಚಕಾರ ಎತ್ತಲಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.

ಲಿಂಗನಾಯಕನಹಳ್ಳಿ ಶ್ರೀ ಚನ್ನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ರವೀಂದ್ರರು ಸಣ್ಣ ವಯಸ್ಸಿನಲ್ಲೂ ದೊಡ್ಡ ಕೆಲಸ ಮಾಡಿದ್ದಾರೆ. ಎಂ.ಪಿ.ಪ್ರಕಾಶ್ ಕುಟುಂಬದ ಜನಸೇವೆ ಇಲ್ಲಿಗೆ ನಿಲ್ಲಬಾರದು. ಹೀಗಾಗಿ ಮಾತೋಶ್ರೀ ರುದ್ರಾಂಬ ಅವರು ತಮ್ಮ ಮಕ್ಕಳಲ್ಲಿ ಒಬ್ಬರನ್ನು ರಾಜಕೀಯವಾಗಿ ಮುಂಚೂಣಿಗೆ ತರಬೇಕು ಎಂದು ಹೇಳಿದರು. 

ಹಂಪಿ ವಿವಿಯ ಶಿವಪ್ರಕಾಶ್ ಮಾತನಾಡಿ, ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸಿದ್ದು ಎಂ.ಪಿ.ರವೀಂದ್ರರ ಜೀವಮಾನದ ಸಾಧನೆ. ಕೇವಲ ಒಂದು ಬಾರಿ ಶಾಸಕರಾಗಿ ಅವರು ಕೈಗೊಂಡ ಕಾರ್ಯಗಳು ಸದಾ ಸ್ಮರಣೀಯ. ಅವರು ಬದುಕಿದ್ದರೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಹೆಸರು ಮಾಡುತ್ತಿದ್ದರು. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿ ಸಾಕಷ್ಟು ಹೆಸರು ಮಾಡಿದ್ದರು ಎಂದರು.

ಜಾನಪದ ಅಕಾಡೆಮಿ ಸದಸ್ಯ ಪಿಚ್ಚಳ್ಳಿ ಶ್ರೀನಿವಾಸ ಮಾತನಾಡಿ, ಸಜ್ಜನ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರು ಸಾಂಸ್ಕೃತಿಕ ರಂಗಕ್ಕೆ ಸಲ್ಲಿಸಿದ ಸೇವೆಯನ್ನು ಮುಂದುವರಿಸಿದವರು ರವೀಂದ್ರರು. ನೆಲಮೂಲ ಸಂಸ್ಕೃತಿ, ಜನಪದ ಕ್ಷೇತ್ರವನ್ನು ಪೋಷಣೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು. 

ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ಸೋಲಿಲ್ಲದ ಸರದಾರನಂತೆ ಬದುಕು ಕಂಡವರು ಸಹೋದರ ರವೀಂದ್ರರು. ಅವರು ನಮ್ಮನ್ನು ಅಗಲಿದ್ದರೂ ಅವರ ಪ್ರತಿಬಿಂಬವನ್ನು ಜನರಲ್ಲಿ ಕಾಣುತ್ತಿದ್ದೇವೆ. ಅಪ್ಪಾಜಿ ಹಾಗೂ ರವೀಂದ್ರ ಅಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದು ಹೇಳಿದರು.

ನೀಲಗುಂದ ಜಿ. ಪಂ. ಸದಸ್ಯ ಎಚ್.ಬಿ. ಪರಶುರಾಮಪ್ಪ ಮಾತನಾಡಿ, ರವೀಂದ್ರ ರದ್ದು ನೇರ-ನುಡಿ ವ್ಯಕ್ತಿತ್ವ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಪ್ರಚಾರ ಮಾಡಲಿಲ್ಲ. ಜನರು 371ಜೆ ಸೌಲಭ್ಯದ ಬಗ್ಗೆ ಅರ್ಥ ಮಾಡಿಕೊಳ್ಳದೇ ಅವರ ಸೋಲಿಗೆ ಕಾರಣರಾದರು. ಅವರಿಗೆ ಆಗಿರುವ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ಸರಿಪಡಿಸ ಬೇಕಿದೆ. ಉಸಿರು ನಿಂತ ಮೇಲೆ ಹೆಸರು ಬರುತ್ತೆ ಎಂಬುದಕ್ಕೆ ರವೀಂದ್ರರೇ ಸಾಕ್ಷಿ ಎಂದರು.

ಎಂ.ಪಿ.ರುದ್ರಂಬಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಡಾ.ಮಹಾಂತೇಶ ಚರಂತಿಮಠ, ಹಲಗೇರಿ ಮಂಜಪ್ಪ, ಎಂ.ಪಿ.ಸುಮಾ, ಸಾಬಳ್ಳಿ ಜಂಬಣ್ಣ, ಟಿ.ಎಚ್.ಎಂ. ಮಂಜುನಾಥ್, ಕವಿತಾ ವಾಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನಾಯ್ಕ್, ಅಲ್ಪ ಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಎ.ಮುಸಾಸಾಬ್, ಬಾಷ ಮುಜಾವಾರ್, ಡಿ.ಶ್ರೀಕಾಂತ್, ದುಗ್ಗಾವತ್ತಿ ಸಿದ್ದನಗೌಡ, ಸಿಂಗ್ರಿಹಳ್ಳಿ ಬಸವರಾಜ್, ರೇಖಮ್ಮ, ಗಾಯತ್ರಿ ದೇವಿ, ಕಾಂತೇಶ್ ಹಾಗೂ ಮತ್ತಿತರರಿದ್ದರು.