December 6, 2019

ಉರಿ, ಪುಲ್ವಮಾ ದುರಂತ – ಸರ್ಜಿಕಲ್ ಸ್ಟ್ರೈಕ್‍ಗಳನ್ನು ಕ್ಷಣ ಮಾತ್ರದಲ್ಲಿ ಮೂಡಿಸಿದ ಸಿದ್ಧಗಂಗಾ ಮಕ್ಕಳು

ದಾವಣಗೆರೆ, ಆ. 15-  ಎತ್ತ ನೋಡಿದರೂ ಸೈನಿಕರ ಹೋರಾಟ, ಕಮಾಂಡೋಗಳ ವೀರಾವೇಶ,  ಶತ್ರು ದಮನಕ್ಕೆ, ಮುನ್ನುಗ್ಗುವ ವಾಯು ಸೇನೆ, ಯುದ್ಧ ವಿಮಾನಗಳ ಹಾರಾಟ, ಶತ್ರು ಸೇನೆಯನ್ನು ನುಚ್ಚು ನೂರು ಮಾಡಲು ಬಂದ ಬೋಪೋರ್ಸ್ ಫಿರಂಗಿಗಳು. ಉರಿ, ಪುಲ್ವಾಮಾದ ಘಟನೆಗಳ ಯಥಾವತ್ ಚಿತ್ರಣ, ಸರ್ಜಿಕಲ್ ಸ್ಟ್ರೈಕ್‍ನ ಸಂಭ್ರಮ ಅಭಿನಂದನ್ ಬಂಧನ – ಬಿಡುಗಡೆ. ಇದು ಸಿನಿಮಾ ಕಥೆಯಲ.್ಲ್ಲ ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ 1500 ಕ್ಕೂ ಹೆಚ್ಚು ಮಕ್ಕಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೃಷ್ಠಿಸಿದ ದೃಶ್ಯಾವಳಿಗಳು. ಕಣ್ರೆಪ್ಪೆಗಳನ್ನು ಪಟಿಸಿದರೆ ಯಾವ ದೃಶ್ಯ ಮೂಡಿ ಮರೆಯಾಗುವುದೋ ಎಂದು ಬಿಟ್ಟ ಕಣ್ಣಿನಿಂದ ಪ್ರತಿಯೊಂದು ಘಟನಾವಳಿಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ಪ್ರೇಕ್ಷಕ ವರ್ಗ `ಸಮರ್ಪಣೆ’ ನೃತ್ಯರೂಪಕವನ್ನು ವೀಕ್ಷಿಸಿ ದೇಶಭಕ್ತಿಯ ಪರಾಕಾಷ್ಠೆಗೆ  ತಲುಪಿದರು. 

ಚಂದ್ರಯಾನ – 2ರ ಯಶಸ್ವಿ ಉಡಾವಣೆಗೆ ಕಾರಣವಾದ ಇಸ್ರೊ ವಿಜ್ಞಾನಿಗಳ ಪರಿಚಯ ಮತ್ತು ಕಾರ್ಯವೈಖರಿಯು, ರಾಕೆಟ್ ಉಡಾವಣೆಯ ಪ್ರಾರಂಭದ ಹಂತದಲ್ಲಿ ಎತ್ತಿನಗಾಡಿ ಮತ್ತು ಬೈಸಿಕಲ್‍ನಲ್ಲಿ ರಾಕೆಟ್ ಹೊತ್ತೊಯ್ದು ಉಡಾಯಿಸಿದ ವಿಜ್ಞಾನಿಗಳ ಕನಸಿನ ಮೂರ್ತರೂಪ ತಾಳಿತು.

ಜನಸಾಮಾನ್ಯರ ಜೀವನ ರಕ್ಷಿಸುವ ಯೋಧರು ಗಡಿಕಾಯಲು ತಮ್ಮವರನ್ನು ಬೀಳ್ಕೊಡುವ ಕೌಟುಂಬಿಕ ದೃಶ್ಯ ಮನಕಲುಕುವಂತಿತ್ತು. ಮೃತ ಯೋಧನ ತಂಗಿ ರೋಧಿಸುವ ದೃಶ್ಯ ಎಲ್ಲರ ಕಣ್ಣನ್ನು ತೇವಗೊಳಿಸಿತು.

ಭೋರ್ಗರೆದು ಹರಿಯುವ ಸಾಗರದಂತೆ ಒಂದೇ ಮಾತರಂ ಗೀತೆಗೆ ವರ್ಣ ರಂಜಿತ ವೇಷಭೂಷಣ ತೊಟ್ಟ ಮಕ್ಕಳು ಕ್ರೀಡಾಂಗಣವನ್ನು ಆವರಿಸಿಕೊಂಡ ದೃಶ್ಯ ರೋಮಾಂಚಕಾರಿಯಾಗಿತ್ತು. ಉತ್ತರದ ಮಣಿಪುರಿ, ಕಥಕ್, ದಕ್ಷಿಣದ ಕಥಕ್ಕಳಿ, ಭರತನಾಟ್ಯದ ಸಾಂಪ್ರದಾಯಿಕ ಅಲಂಕಾರದಿಂದ ಕಂಗೊಳಿಸಿದ ಬಾಲೆಯರು ಬಾಗಿ ಬಳುಕಿ ವಿವಿಧ ನಾಟ್ಯ ಪ್ರಕಾರಗಳನ್ನು ಪ್ರತಿಬಿಂಬಿಸಿ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಿದರು. 

ಹಿನ್ನೆಲೆಯಲ್ಲಿ ಕುಳಿತ ಸುಮಾರು 600 ಮಕ್ಕಳು ಬಿಳಿ ಮತ್ತು ಕಪ್ಪು ಪ್ಲೇ ಕಾರ್ಡ್ ಹಿಡಿದು ಸಾಂದರ್ಭಿಕವಾಗಿ ಪದಜೋಡಣೆ ಮಾಡಿ ಅಚ್ಚರಿ ಮೂಡಿಸಿದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿದ್ಯಾರ್ಥಿಗಳು ವಿಂಗ್ ಕಮಾಂಡರ್ ಅಭಿನಂದನ್ ಚಿತ್ರ ಮತ್ತು ಯೋಧರ ಚಿತ್ರಗಳನ್ನು ಬರೆದಿದ್ದು ವೀಕ್ಷಕರಿಗೆ ಅದ್ಭುತವೆನಿಸಿತು. 

ಸನ್ನಿವೇಶಗಳಿಗೆ ತಕ್ಕ ಸಂಭಾಷಣೆಯ ಜೊತೆಗೆ ಪ್ರತಿ ಪಾತ್ರಕ್ಕೂ ಜೀವತುಂಬಿದ ಸಿದ್ಧಗಂಗಾ ಸಂಸ್ಥೆಯ ಮಕ್ಕಳು ನಿಜ ಅರ್ಥದಲ್ಲಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಷ್ಟ್ರಧ್ವಜಗಳ ಹಾರಾಟ, ಕೇಸರಿ, ಬಿಳಿ, ಹಸಿರು ಬಣ್ಣಗಳ ಓಕುಳಿ, ತ್ರಿವರ್ಣ ಛತ್ರಿಗಳು, ಕೋಲುಗಳು ಇಡೀ ವಾತಾವರಣವನ್ನು ವರ್ಣಮಯಗೊಳಿಸಿತು. ಮಳೆರಾಯನೂ ಈ ಮಕ್ಕಳ ಸಮರ್ಪಣಾ ಭಾವಕ್ಕೆ ಸ್ತಬ್ಧನಾಗಿದ್ದ. ಎಂದಿನಂತೆ ಡಾ|| ಜಯಂತ್‍ರವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ದೇಶಭಕ್ತಿಯನ್ನು ಅನುರಣಿಸಿತು.