March 18, 2019

ಮಲ್ಲಶೆಟ್ಟಿಹಳ್ಳಿ ಗೋಕಟ್ಟೆ ಇನ್ನು ಕೆರೆ

4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆರೆ ಕಾಮಗಾರಿ ಪರಿಶೀಲಿಸಿದ ತರಳಬಾಳು ಜಗದ್ಗುರುಗಳು

ನಗರ ಸಮೀಪದ ಮಲ್ಲಶೆಟ್ಟಿಹಳ್ಳಿ ಗೋಕಟ್ಟೆಯನ್ನು `ಕೆರೆ’ಯಾಗಿ ಅಭಿವೃದ್ಧಿ ಪಡಿಸುವ ಮೂಲಕ 22 ಕೆರೆಗಳಿಗೆ ನಿರಂತರವಾಗಿ ನೀರು ಹರಿಸುವ ಕಾಮಗಾರಿಯನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶನಿವಾರ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾಮಗಾರಿ ಕುರಿತು ಅಧಿಕಾರಿ ಗಳಿಂದ ವಿವರ ಪಡೆದ ಶ್ರೀಗಳು, ಗೋಕಟ್ಟೆಯನ್ನು ಜಾಕ್‌ವೆಲ್‌ ಉದ್ದೇಶಕ್ಕಾಗಿ ಕೇವಲ `ಮೀನಿನ ತೊಟ್ಟಿ’ಯಂತೆ ನಿರ್ಮಿಸಬಾರದು. ಲಭ್ಯವಿರುವ 16 ಎಕರೆ ಜಮೀನು ಬಳಸಿಕೊಂಡು ಪೂರ್ಣ ಪ್ರಮಾಣದ ಕೆರೆಯಾಗಿ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.

ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ. 1 ಉಪ ವಿಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಯ ಬಗ್ಗೆ ಶ್ರೀಗಳಿಗೆ ವಿವರ ನೀಡಿದ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ.ಆರ್. ಕೊಟ್ರೇಶ್, ಮಂಜೂರಾದ ಅನುದಾನಕ್ಕೆ ಅನುಗುಣವಾಗಿ `ಬ್ಯಾಲೆನ್ಸಿಂಗ್ ರಿಸರ್ವೇಯರ್’ (ನೀರು ಕಾಯ್ದುಕೊಳ್ಳುವ ಸಂಗ್ರಹಾಗಾರ) ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ವಾರದಿಂದ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇನ್ನು ಒಂದೂವರೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರದಲ್ಲಿ ರಾಜನಹಳ್ಳಿ ಜಾಕ್‌ವೆಲ್‌ ನಂ.1ರಲ್ಲಿ ತೊಂದರೆ ಉದ್ಭವಿಸಿದರೂ ಸಹ, ಮಲ್ಲಶೆಟ್ಟಿಹಳ್ಳಿಯ ಜಾಕ್‌ವೆಲ್‌ 2 ಕಾರ್ಯನಿರ್ವಹಣೆಗೆ ತೊಡಕಾಗುವುದಿಲ್ಲ ಎಂದು ವಿವರಿಸಿದರು.

ನೀರು ಪೂರೈಕೆಗಾಗಿ ವಾಲ್ವ್ ಅಳವಡಿಸಲಾಗುವುದು. ವಿದ್ಯುತ್ ನಿರಂತರವಾಗಿದ್ದಾಗ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ವಾಲ್ವ್ ತಿರುವಿಕೊಂಡು ರಿಸರ್ವಿಯರ್‌ನಿಂದ ನೀರು ಪಡೆಯಲಾಗುವುದು ಎಂದರು.

ಇದಕ್ಕೆ ಒಪ್ಪದ ಶ್ರೀಗಳು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಗ್ಗೆ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ವಾಲ್ವ್ ನಿರ್ವಹಿಸುವುದು ಸಾಧ್ಯವಾಗದು. ಸ್ವಯಂ ಚಾಲಿತವಾಗಿ ನೀರು ಇಲ್ಲಿನ ಕೆರೆಗೆ ಬರಬೇಕು, ಆ ನೀರು ಮುಂದಿನ ಕೆರೆಗಳಿಗೆ ಹೋಗಬೇಕು. 15 ದಿನಗಳ ಕಾಲ ರಾಜನಹಳ್ಳಿ ಜಾಕ್‌ವೆಲ್‌ನಿಂದ ನೀರು ಬರದಿದ್ದರೂ, ಇಲ್ಲಿಂದ ನೀರು ಮುಂದೆ ಸಾಗಲು ಯಾವುದೇ ತೊಂದರೆ ಇರದಂತೆ ವ್ಯವಸ್ಥೆ ಮಾಡಿದರೆ ಸೂಕ್ತವಾಗುತ್ತದೆ ಎಂದು ತಿಳಿಸಿದರು.

ಗೋಕಟ್ಟೆಯನ್ನು ಪೂರ್ಣ ಪ್ರಮಾಣದ ಕೆರೆಯಾಗಿ ಅಭಿವೃದ್ಧಿ ಪಡಿಸಬೇಕು.  `ಬ್ಯಾಲೆನ್ಸಿಂಗ್ ರಿಸರ್ವಿಯರ್’ ಹೆಸರಿನಲ್ಲಿ `ಫಿಷ್ ಪಾಂಡ್’ (ಮೀನಿನ ತೊಟ್ಟಿ) ರೀತಿ ಮಾಡಬೇಡಿ. ಈಗಾಗಲೇ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅಗತ್ಯವಾದಲ್ಲಿ ಮತ್ತಷ್ಟು ಅನುದಾನಕ್ಕೆ ಉನ್ನತ ಅಧಿಕಾರಿಗಳ ಮೂಲಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶ್ರೀಗಳು ಹೇಳಿದರು.

ಇದೇ ವೇಳೆ ಗ್ರಾಮಸ್ಥರ ಜೊತೆಗೂಡಿ ಜಾಕ್‌ವೆಲ್‌ ಹಾಗೂ ಗೋಕಟ್ಟೆಯ ಜಾಗವನ್ನು ಪರಿಶೀಲಿಸಿದರು. ಒಟ್ಟು 16 ಎಕರೆ ಜಾಗ ಲಭ್ಯವಿದ್ದುದನ್ನು ಪರಿಗಣಿಸಿದ ಶ್ರೀಗಳು, ಹದಿನೈದು ದಿನಗಳಲ್ಲಿ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಬೇಕು. ನಂತರ ಸಂಪೂರ್ಣ ಜಾಗವನ್ನು ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ ಯೋಜನೆಗೆ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಭರಮಸಾಗರ ಕೆರೆ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್‌ ಚೌಲಿಹಳ್ಳಿ, ಮುಖಂಡರಾದ ಬಿ.ಎಸ್. ಜಗದೀಶ್, ಎಂ.ಡಿ. ಮಲ್ಲೇಶಪ್ಪ,  ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್‌,  ರೈತ ಮುಖಂಡ ಹೊನ್ನೂರು ಮುನಿಯಪ್ಪ, ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಜಿ. ಗಂಗಪ್ಪ, ಯೋಜನೆಯ ಗುತ್ತಿಗೆದಾರ ಬಿ.ಜಿ. ಶೀಲವಂತ್,  ಗ್ರಾಮಸ್ಥರಾದ ದಳಪತಿ ರೇವಣಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.