ಇಷ್ಟಲಿಂಗ ಪೂಜೆಯಲ್ಲಿ ಭಕ್ತಿಪರವಶ

ರೇಣುಕಾ ಮಂದಿರದಲ್ಲಿ ಆರಂಭವಾದ ರಂಭಾಪುರಿ ಶ್ರೀಗಳ ಇಷ್ಟಲಿಂಗ ಪೂಜೆ

ದಾವಣಗೆರೆ, ಸೆ. 29- ಅತ್ತ ಬಾನಂಗಳಲ್ಲಿ ಸೂರ್ಯ ಉದಯಿಸುತ್ತಿದ್ದಂತೆ, ಇತ್ತ ದೇವ ನಗರಿಯ ಅಭಿನವ ರೇಣುಕಾ ಮಂದಿರದಲ್ಲಿ ಸಂಪೂರ್ಣ ಶಿವಮಯ ವಾತಾವರಣ ನಿರ್ಮಾಣ ವಾಗಿತ್ತು. ಅಪಾರ ಸಂಖ್ಯೆಯ ಭಕ್ತರು ರಂಭಾಪುರಿ ಜಗದ್ಗುರುಗಳ ಸಮ್ಮುಖದಲ್ಲಿ ಭಕ್ತಿ ಪರವಶರಾಗಿದ್ದರು.

ಭಾನುವಾರದಿಂದ ಹತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಆರಂಭದ ದಿನವೇ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಇಷ್ಟಲಿಂಗ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು,  ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇತ್ತ  ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಳ್ಳುತ್ತಿದ್ದಂತೆ ಸ್ನಾನ ಮಾಡಿ, ಮಡಿ ಬಟ್ಟೆ ತೊಟ್ಟು ಬರುವ ಭಕ್ತರು, ರಂಭಾಪುರಿ ಶ್ರೀಗಳು ಬರುತ್ತಿದ್ದಂತೆ ಭಾವಪರವಶರಾಗಿ ಇಷ್ಟಲಿಂಗ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು.  ಈ ರೀತಿಯಾಗಿ ಸಾಮೂಹಿಕವಾಗಿ ಕುಳಿತು ಪೂಜೆ ಮಾಡುವುದನ್ನು ನೋಡುವುದು ಕಣ್ಣಿಗೊಂದು ಹಬ್ಬ. 

ಮೂರು ಗಂಟೆಗೂ ಹೆಚ್ಚಿನ ಕಾಲ ಪೂಜೆ ನಡೆಯುವುದರಿಂದ ಮುಂಜಾನೆಯ ಈ ವಾತಾವರಣ ಸಂಪೂರ್ಣ ಶಿವಮಯ ವಾಗಿರುತ್ತದೆ. ಇಷ್ಟಲಿಂಗ ಪೂಜೆಯ ನಂತರ ಶ್ರೀಗಳು ಆಶೀರ್ವಚನ ನೀಡುವ ಮೂಲಕ ಭಕ್ತರ ಮನದಲ್ಲಿರುವ ಗೊಂದಲಗಳಿಗೆ ಸೂಕ್ತ ಪರಿಹಾರವನ್ನೂ ನೀಡುತ್ತಾರೆ. ಹೀಗಾಗಿ ದೇವರು, ಪೂಜೆ ಬಗ್ಗೆ ನಂಬಿಕೆ ಇಲ್ಲದವರೂ ಈ ಪ್ರವಚನ ಕೇಳುವ ಉದ್ದೇಶದಿಂದ ಭಕ್ತರು ಆಗಮಿಸುತ್ತಾರೆ. ಇದರಿಂದ ಧಾರ್ಮಿಕ ಭಾವನೆಯಷ್ಟೇ ಅಲ್ಲ ಮನಸ್ಸಿನಲ್ಲಿ ಏನೋ ಒಂದು ಉತ್ಸಾಹ ಮೂಡುತ್ತದೆ ಎಂಬುದು ಭಕ್ತರ ಅನಿಸಿಕೆ.

ಅಂಗದ ಮೇಲೆ ಲಿಂಗ ಇಟ್ಟವರೆಲ್ಲರೂ ವೀರಶೈವರು. ಇಷ್ಟ ಲಿಂಗಾರ್ಚನೆಗೆ ಯಾವ ಸೂತಕವೂ ಅನ್ವಯಿಸುವುದಿಲ್ಲ’ ಎಂಬ ಬಾಳೆಹೊನ್ನೂರಿನ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ವಾಣಿಯಂತೆ ಕೇವಲ ಪಂಚಪೀಠಕ್ಕೆ ಸೇರಿದವರಲ್ಲದೆ, ಎಲ್ಲಾ ವರ್ಗದ ಜನತೆಯೂ ಸಹ ಶ್ರೀಗಳು ಮಾಡುವ ಇಷ್ಟಲಿಂಗ ಪೂಜೆಗೆ ಆಗಮಿಸಿ ಧನ್ಯರಾಗುತ್ತಿದ್ದಾರೆ.

ಜಗದ್ಗುರುಗಳ ಇಷ್ಟಲಿಂಗ ಪೂಜೆಗೆ ಸಾಥ್ ನೀಡಿದ ರಂಭಾಪುರಿ ಶಾಖಾ ಮಠದ ವಿವಿಧ ಸ್ವಾಮೀಜಿಗಳು ಲಿಂಗಾಷ್ಟಕ, ಪಂಚಾಕ್ಷರಿ ಮಂತ್ರ ಸೇರಿದಂತೆ ವಿವಿಧ ಮಂತ್ರಗಳನ್ನು ಹೇಳುತ್ತಾ ವಾತಾವರಣವನ್ನು ಮಂತ್ರಮುಗ್ಧವನ್ನಾಗಿಸಿದ್ದರು.

ಹಿಂದೂ ಧರ್ಮದಲ್ಲಿ ಮಹಾಮಾತೆ ಶಕ್ತಿಗೆ ಒಂದು ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಶರದ್‌ ಋತುವಿನಲ್ಲಿ ಬರುವ ಈ ಮಹಾನವಮಿಗೆ ಶರನ್ನವರಾತ್ರಿ ಎಂದು ಕರೆಯಲಾಗುತ್ತದೆ. ರಂಭಾಪುರಿ ಸ್ವಾಮೀಜಿ ನಡೆಸುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್‌ ಹಾಗೂ ಜನ ಜಾಗೃತಿ ಧರ್ಮ ಸಮ್ಮೇಳನ ಜನರ ಮನದಲ್ಲಿರುವ ಸಂಕುಚಿತ ವಿಚಾರಧಾರೆ, ಜನರ ನಡುವಿನ ವೈಮನಸ್ಸು ದೂರ ಮಾಡಿ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯನ್ನು ಉಳಿಸಿಕೊಂಡು ಬರುವ ಮಹತ್ಕಾರ್ಯ ಉಂಟು ಮಾಡುತ್ತಿದೆ.