August 17, 2019

ಆಧುನಿಕ ಭರಾಟೆಯಲ್ಲಿ ಮೌಲ್ಯಗಳ ಕುಸಿತ

ಡಾ. ಮಂಜುನಾಥ ಕುರ್ಕಿ

ದಾವಣಗೆರೆ : ಇಂದು ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಆಧುನಿಕ ಜೀವನವನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಅತ್ಯಂತ ಕಷ್ಟಪಟ್ಟು ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉತ್ತಮ ನೌಕರಿಯನ್ನು ಹೊಂದುವಂತೆ ಮಾಡಿ, ಲಕ್ಷಗಟ್ಟಲೆ ಸಂಬಳ ಪಡೆಯುವಂತಹ ಆಶಯದೊಂದಿಗೆ ಜೀವನ ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುವ ಕೆಲವು ಜನ ಮಕ್ಕಳು ತಮ್ಮ ತಂದೆ-ತಾಯಿಗಳನ್ನು  ವೃದ್ಧಾಶ್ರಮದಲ್ಲಿ ನೀರಸ ಜೀವನವನ್ನು ನಡೆಸುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಹೆಚ್.ಎಸ್.ಮಂಜುನಾಥ ಕುರ್ಕಿ ಅವರು ಅತ್ಯಂತ ವಿಷಾದದಿಂದ ನುಡಿದರು. 

ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ನಗರದ ಎ.ಆರ್.​ಎಂ. ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ   ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಆಧುನಿಕ ಭರಾಟೆಯಲ್ಲಿ ಮೌಲ್ಯಗಳು ಕುಸಿತವಾಗುತ್ತಿರುವ ಈ ಸಂದರ್ಭದಲ್ಲಿ ಜೀವನ ಮೌಲ್ಯವನ್ನು ಬಿತ್ತುವಂತಹ ಹಾಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ನೈತಿಕ ಮೌಲ್ಯವನ್ನು ಬೆಳೆಸಿ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗುವಂತೆ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳ ಮೂಲಕ ಅಣಿಗೊಳಿಸುವ ಕೆಲಸ  ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ    ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ ಅವರು `ಕರ್ನಾಟಕದ ಅರಸು ಮನೆತನಗಳ ಕೊಡುಗೆ’  ವಿಷಯದ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿ, ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಅರಸು ಮನೆತನಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಅಂತಹ ಪ್ರಮುಖ ಅರಸು ಮನೆತನಗಳಲ್ಲಿ 22ಕ್ಕೂ ಹೆಚ್ಚು ಅರಸು ಮನೆತನಗಳ ಆಡಳಿತಾತ್ಮಕ, ಸಾಂಸ್ಕೃತಿಕ, ಸಾಹಿತ್ಯಿಕ, ವಾಸ್ತುಶಿಲ್ಪ ಹಾಗೂ ಕನ್ನಡ ನಾಡು ನುಡಿಯ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖ ರಾಜರುಗಳ ಐತಿಹ್ಯವನ್ನು ವಿವರಿಸಿದರು. 

ಕಾಲೇಜಿನ ಬಿ.ಎ. ಮತ್ತು ಬಿ.ಕಾಂ. ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಆರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಸಾಹಿತ್ಯಿಕ ಕೃತಿ ನೀಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಅವರು ಮಾತನಾಡಿ, ದಾವಣಗೆರೆ ತಾಲ್ಲೂಕಿನಲ್ಲಿ ಚಾಲ್ತಿ ವರ್ಷದಲ್ಲಿ ಇಂದು 77 ದತ್ತಿಗಳ ಭಾವನಾತ್ಮಕ ಕನ್ನಡದ ತೇರಿನ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪ ಎನ್ನಬಹುದಾದ ಈ ಕಾರ್ಯಕ್ರಮಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹಾಗೂ ದತ್ತಿ ದಾನಿಗಳು  ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಟ್ಟಂತಹ ಶಾಲಾ- ಕಾಲೇಜುಗಳು ಹಾಗೂ ಸಂಘಟನೆಗಳನ್ನು  ಅಭಿನಂದಿಸಿ, ಸ್ಮರಣ ಗೌರವದ ನುಡಿಗಳನ್ನು ಅರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಹೆಚ್.ಪ್ಯಾಟಿ ಅವರು ವಹಿಸಿ, ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳನ್ನು ಸುಜ್ಞಾನಿಗಳನ್ನಾಗಿಸುವಲ್ಲಿ ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವಲ್ಲಿ ಸ್ವಲ್ಪ ಮಟ್ಟಿಗಾದರೂ ಸಾಹಿತ್ಯ ಅಭಿರುಚಿಯನ್ನು ಬೆಳೆಸುವಲ್ಲಿ ಕಾರಣೀಭೂತವಾಗುತ್ತದೆ ಎಂದು ಶ್ಲಾಘಿಸಿದರು. 

ಬಡಾವಣೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವಿಟ್ಲಾಪುರದ ರುದ್ರಪ್ಪ, ಕನ್ನಡ ವಿಭಾಗದ ಪ್ರೊ. ಡಿ. ಆಂಜಿನಪ್ಪ, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ,  ಶ್ರೀಮತಿ ಎಸ್.ಎಂ.ಮಲ್ಲಮ್ಮ, ನಿರ್ದೇಶಕರುಗಳಾದ ಬಿ.ಎಂ. ಮುರುಗೆಯ್ಯ, ಎಂ.ಷಡಾಕ್ಷರಪ್ಪ ಬೇತೂರು, ಬಿ.ಎಸ್. ಜಗದೀಶ್  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕು. ಅಪ್ಸಾನಾ ಬಾನು ಪ್ರಾರ್ಥಿಸಿದ ನಂತರ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಡಿ.ಎನ್. ಮೌನೇಶ್ವರ ಸ್ವಾಗತಿಸಿದರು. ವಂದನಾರ್ಪಣೆಯನ್ನು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಡಜ್ಜಿ ಶಿವಪ್ಪ  ಮಾಡಿದರು.  

ಕಾರ್ಯಕ್ರಮವನ್ನು ಕನ್ನಡ ವಿಭಾಗದ ಪ್ರೊ. ಡಿ. ಆಂಜಿನಪ್ಪ ನಿರೂಪಿಸಿದರು.

Please follow and like us: