ಅನುದಾನ ಭರಪೂರ, ಕಾಮಗಾರಿಗೇ `ಬರ’

ಅನುದಾನ ಬಳಸದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ತರಾಟೆ

ದಾವಣಗೆರೆ : ಬರ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ಅನುದಾನ ಬಳಸಿಕೊಳ್ಳುವಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಬರ ಪರಿಸ್ಥಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ಪಂಚಾಯ್ತಿ ಬಳಿ ಬರ ನಿರ್ವಹಣೆಗಾಗಿ 1.4.2019ರಂದು 13.36 ಕೋಟಿ ರೂ.ಗಳ ಅನುದಾನ ಇದೆ. ಆದರೆ, ಗೋ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಹೈಕೋರ್ಟ್‌ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದವರು ಆಕ್ಷೇಪಿಸಿದರು.

ಸಿ.ಆರ್.ಎಫ್. ಪಿ.ಡಿ. ಖಾತೆಗೆ 13.36 ಕೋಟಿ ರೂ. ಜಮಾ ಆಗಿದೆ. ಆದರೆ, ವೆಚ್ಚವಾಗಿರುವುದು ಕೇವಲ 2.48 ಕೋಟಿ ರೂ. ಇನ್ನೂ 10.17 ಕೋಟಿ ರೂ. ಅನುದಾನ ಬಾಕಿ ಉಳಿಸಿಕೊಳ್ಳಲಾಗಿದೆ. ಬರ ಪರಿಹಾರಕ್ಕೆಂದು ಬಿಡುಗಡೆ ಆಗಿರುವ ಈ ಹಣ ಬಳಕೆಯಾಗದಿದ್ದರೆ ವಾಪಸ್ ಹೋಗಲಿದೆ ಎಂದವರು ಎಚ್ಚರಿಸಿದರು.

ಬೋರ್‌ವೆಲ್‌ ಯಶಸ್ಸಿನಿಂದ ಉಸ್ತುವಾರಿ ಕಾರ್ಯದರ್ಶಿಗೆ ಗಾಬರಿ !
ಬೇಸಿಗೆಯಲ್ಲಿ ಜನರಿಗೆ ನೆರವಾಗಲು ಜನವರಿ – ಮಾರ್ಚ್ ಅವಧಿಯಲ್ಲಿ ಜಿಲ್ಲೆಯಲ್ಲಿ 445 ಬೋರ್‌ಗಳನ್ನು ಕೊರೆಯಲಾಗಿದೆ ಇದರಲ್ಲಿ ಕೇವಲ 13 ಬೋರ್‌ಗಳು ಮಾತ್ರ ವಿಫಲವಾಗಿದ್ದು, 432 ಬೋರ್‌ಗಳಲು `ಯಶಸ್ವಿ’ಯಾಗಿವೆ ಎಂದು ಅಧಿಕಾರಿಗಳು ನೀಡಿದ ವರದಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ `ಗಾಬರಿ’ಯಾಗುವಂತೆ ಮಾಡಿತು.
ಅಂತರ್ಜಲ ಹೆಚ್ಚಾಗಿರುವ ಪ್ರದೇಶಗಳಲ್ಲೇ ಇಷ್ಟು ಪ್ರಮಾಣದ ಯಶಸ್ಸು ಸಿಗುವುದಿಲ್ಲ. ಹೀಗಿರುವಾಗ ಬರ ಘೋಷಿತವಾಗಿರುವ ಪ್ರದೇಶಗಳಲ್ಲಿ ಇಷ್ಟು ಪ್ರಮಾಣದ ಯಶಸ್ಸು ಸಿಗಲು ಹೇಗೆ ಸಾಧ್ಯ? ಎಂದವರು ಪ್ರಶ್ನೆ ಮುಂದಿಟ್ಟರು.
ಬೋರ್‌ವೆಲ್‌ `ಯಶಸ್ಸು’ ಎಂದರೆ ಏನು ಎಂದು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಅರ್ಧ ಇಂಚು ನೀರು ಬಿದ್ದರೂ ಸಹ ಯಶಸ್ಸು ಎಂದು ಪರಿಗಣಿಸಲಾಗುವುದು ಎಂದರು.
ಇದನ್ನು ಒಪ್ಪದ ಉಮಾಶಂಕರ್, ಒಂದೆರಡು ತಿಂಗಳು ನೀರು ಬಂದು ಹೋದರೆ ಪ್ರಯೋಜನವಿಲ್ಲ. ವರ್ಷಗಳವರೆಗಾದರೂ ಬೋರ್‌ನಲ್ಲಿ ನೀರಿದ್ದರೆ ಮಾತ್ರ ಅದು ಪ್ರಯೋಜನಕಾರಿ. ಹೀಗಾಗಿ `ಯಶಸ್ಸಿನ’ ಮಾನದಂಡ ಬದಲಿಸಿಕೊಳ್ಳಿ ಎಂದರು.

ಬೇಸಿಗೆಯಲ್ಲೇ ಬರ ನಿರ್ವಹಣೆ ಕಾಮ ಗಾರಿಗಳನ್ನು ಗುರುತಿಸಿ ಕ್ರಮ ತೆಗೆದು ಕೊಳ್ಳಬೇಕು. ಮಳೆ ಆರಂಭವಾದರೆ ಮೇಲೆ ಕಾಮಗಾರಿ ಮಾಡಲು ಹೊರಟರೆ ಏನೂ  ಪ್ರಯೋಜನವಿಲ್ಲ. ಜೂನ್ ಒಳಗೆ ಎಲ್ಲಾ ಅನುದಾನ ಬಳಕೆಯಾಗಬೇಕು. ಕುಡಿ ಯುವ ನೀರಿನಿಂದ ಆಸ್ತಿ ಸೃಷ್ಟಿಯವರೆಗಿನ ಕಾಮ ಗಾರಿಗಳನ್ನು ತಕ್ಷಣ ಆರಂಭಿಸಿ. ಅಥವಾ ಕಾಮಗಾರಿಗಳ ಅಗತ್ಯವಿಲ್ಲ ಎಂದರೆ ದುಡ್ಡು ವಾಪಸ್ ಕೊಡಿ ಎಂದವರು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರ ಪೀಡಿತವಾಗಿವೆ. ಹೀಗಾಗಿ ಈಗಾಗಲೇ ಹಣ ಖರ್ಚು ಮಾಡಿ, ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಕಳಿಸಬೇಕಿತ್ತು. ಇಲ್ಲಿ ನೋಡಿದರೆ ಬಿಡುಗಡೆಯಾದ ಹಣದ ದೊಡ್ಡ ಭಾಗವೇ ಖರ್ಚಾಗಿಲ್ಲ ಎಂದವರು ಆಕ್ಷೇಪಿಸಿದರು. ಮೇವು ಕಿಟ್‌ಗಳನ್ನು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿತರಣೆ ಮಾಡಿದ್ದೀರಿ. ಆದರೆ, ಮೇವು ಬ್ಯಾಂಕುಗಳನ್ನು ತೆರೆದಿಲ್ಲ. ಮೇವು ಬ್ಯಾಂಕ್ ತೆರೆದಿದ್ದರೆ ಕನಿಷ್ಠ ಕಡಿಮೆ ವೆಚ್ಚದಲ್ಲಾದರೂ ಜನರಿಗೆ ಮೇವು ಸಿಗುತ್ತಿತ್ತು. ಗೋಶಾಲೆಗಳನ್ನು ತೆರೆದಿದ್ದರೆ ಜನರಿಗೆ ಬೇಸಿಗೆಯಲ್ಲಿ ದನಗಳನ್ನು ನಿರ್ವಹಿಸುವ ಹೊರೆ ತಪ್ಪುತ್ತಿತ್ತು. ಮೂರು ತಿಂಗಳು ದನಗಳಿಗೆ ಮೇವು ಕೊಡಲಾಗದೇ ರೈತರು ದನಗಳನ್ನು ಮಾರುವ ಸ್ಥಿತಿಗೆ ಹೋಗುತ್ತಾರೆ. ಗೋಶಾಲೆ ತೆರೆದರೆ ಸುಮ್ಮನೆ ತಲೆನೋವು ಎಂಬ ಭಾವನೆ ಅಧಿಕಾರಿಗಳಲ್ಲಿದೆ. ಇದು ಕೆಟ್ಟ ಪ್ರವೃತ್ತಿ. ಫ್ಯಾನ್ ಕೆಳಗೆ ಕುಳಿತು ಕೆಲಸ ಮಾಡಲು ನೀವಿಲ್ಲಿ ಬಂದಿಲ್ಲ. ನೀವು ಇರುವುದೇ ಕೆಲಸ ಮಾಡಲು. ಗೋರಕ್ಷಣೆ ಅಂತ ಕೇವಲ ಭಾಷಣ ಬಡಿದರೆ ಆಗುವುದಿಲ್ಲ. ಗೋಶಾಲೆಗಳನ್ನು ತೆರೆಯಬೇಕು ಎಂದು ಖಡಕ್ ಸೂಚನೆ ನೀಡಿದರು.

ಮೇವು ಲಭ್ಯವಷ್ಟೇ ಅಲ್ಲ ಕೈಗೆಟಕಬೇಕು

ಜಗಳೂರು ಹೊರತುಪಡಿಸಿದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಹೀಗಾಗಿ ಜಿಲ್ಲೆ ಯಲ್ಲಿ ಮೇವಿನ ಕೊರತೆ ಇಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಇದಕ್ಕೆ ಸಮ್ಮತಿಸದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್, ಮೇವು ಲಭ್ಯವಿದ್ದ ಮಾತ್ರಕ್ಕೆ ರೈತರಿಗೆ ನೆರವಾದಂತಲ್ಲ. ಮೇವು ಕಡಿಮೆ ದರದಲ್ಲಿ ಸಿಗುವಂತಾಗಬೇಕು. ಇದಕ್ಕಾಗಿ ಕೈಗಟಕುವ ದರದಲ್ಲಿ ಮೇವು ಸಿಗುವಂತೆ ಮಾಡಿ. ಈ ಬೇಸಿಗೆಯಲ್ಲಿ ಮೇವು ನಿರ್ವಹಣೆಯನ್ನು ಅಧಿಕಾರಿಗಳೇ ನೋಡಿಕೊಳ್ಳಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜೇಂದ್ರ, ಒಂದು ವಾರದಲ್ಲಿ ಗೋಶಾಲೆಗಳನ್ನು ತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಬೀಸಿದ ಭಾರೀ ಗಾಳಿಯಿಂದಾಗಿ 160 ಎಕರೆ ಕೃಷಿ ಬೆಳೆ ಹಾಗೂ 135 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಿಂದ 23 ಲಕ್ಷ ರೂ. ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದರು.

ಭತ್ತದ ಬೆಳೆಗೆ ನೀರಿಗಾಗಿ ಕ್ರಮ ತೆಗೆದುಕೊಳ್ಳಿ

ಜಿಲ್ಲೆಯಲ್ಲಿ 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕೊನೆ ಹಂತದವರೆಗೆ ನೀರು ಲಭ್ಯವಾಗುತ್ತಿಲ್ಲ. ಕೊನೆ ಹಂತದವರೆಗೂ ನೀರಿನ
ಅಗತ್ಯವಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ನಿರ್ಣಯ ಜಾರಿಗೆ ತಂದು ಜಲಾನಯನ ನಿರ್ವಹಣಾ ಅಧಿಕಾರಿಗಳಿಗೆ ಕಳಿಸಿ. ಕೊನೆ ಹಂತದ ಭತ್ತದ ಬೆಳೆಯನ್ನು ಉಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ ತಿಳಿಸಿದರು.

ಗಾಳಿಯಿಂದ ಆಗುವ ಬೆಳೆ ಹಾನಿಗೆ ವಿಮೆಯಲ್ಲಿ ಪರಿಹಾರ ದೊರೆಯುವುದಿಲ್ಲ. ಆದರೆ, ಸರ್ಕಾರದಿಂದ ಬಾಳೆಗೆ ಪ್ರತಿ ಹೆಕ್ಟೇರ್‌ಗೆ 13.50 ಸಾವಿರ ರೂ. ಹಾಗೂ ಅಡಿಕೆಗೆ 18 ಸಾವಿರ ರೂ. ಪರಿಹಾರ ದೊರೆಯಲಿದೆ ಎಂದು ಮುದ್ಗಲ್ ಹೇಳಿದರು. ಮುಂಗಾರಿನಲ್ಲಿ 86.48 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಇದುವರೆಗೂ 13.66 ಕೋಟಿ ರೂ. ಪರಿಹಾರ ಬಂದಿದ್ದು, ಅದು ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಭೀಮಾನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಾನಂದ ಕುಂಬಾರ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಕಾಂತ್, ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ನಜ್ಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.