ಅಕ್ಕಮಹಾದೇವಿ ಚಿಂತನೆ ಅಳವಡಿಸಿಕೊಂಡಲ್ಲಿ ಜೀವನ ವೃದ್ಧಿ

ದಾವಣಗೆರೆ : ವೈರಾಗ್ಯ ನಿಧಿ ಶರಣೆ ಅಕ್ಕಮಹಾದೇವಿ ಅವರ ಆದರ್ಶವೇ ವೈಚಾರಿಕತೆ. ಅವರ ವೈಚಾರಿಕ ಚಿಂತನೆಯನ್ನು ಮಹಿಳೆಯರು ಅಳವಡಿಸಿಕೊಳ್ಳಬೇಕು. ಆಗ ಜೀವನ ವೃದ್ಧಿಸಲಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಅವರು,  ನಗರದ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಸಮಾಜದ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವದ ಅಂಗವಾಗಿ ಕಳೆದ ವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಜೆ ಹಾಗೂ ವಚನೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಮೊಟ್ಟ ಮೊದಲು ವಿಶ್ವಗುರು ಬಸವಣ್ಣನವರು ಸ್ತ್ರೀಯರಿಗೆ ಸಮಾನತೆ ದೊರಕಿಸಿಕೊಟ್ಟರು. ಅಲ್ಲದೇ ಅವರು ಸಮಾಜದಲ್ಲಿಂದ್ದಂತಹ ಮೂಢನಂಬಿಕೆ, ಕಂದಾಚಾರಗಳನ್ನೆಲ್ಲಾ ತೆಗೆದು ಹಾಕಿದ್ದರು ಎಂದು ಸ್ಮರಿಸಿದರು.

ಪ್ರಸ್ತುತ ಮಹಿಳೆಯರು ಟಿವಿ ವಾಹಿನಿಗಳಲ್ಲಿ ಬರುವ ಜ್ಯೋತಿಷಿಗಳು ಹೇಳುವ ಭವಿಷ್ಯಗಳಿಗೆ ಮಾರು ಹೋಗಿದ್ದು, ಅವರ ಮಾತುಗಳನ್ನೇ ಕೇಳುತ್ತಿದ್ದಾರೆ. ದೇವರ ಪೂಜೆ, ಹಬ್ಬಗಳ ಆಚರಣೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಇತ್ತೀಚೆಗೆ ಸಾಕಷ್ಟು ಮಹಿಳೆಯರು ಇಂತಹ ಮೂಢನಂಬಿಕೆಗಳ ಆಚರಣೆಗೆ ಒಳಗಾಗಿದ್ದಾರೆ ಎಂದು ವಿಷಾಧಿಸಿದರು.

ಮೂಢನಂಬಿಕೆಯಿಂದ ಹೊರ ಬಾರದ ಮಹಿಳೆಯರು

ಸಮಸ್ಯೆಗೊಂದು ಪರಿಹಾರ ಎಂಬುದಿದೆ. ಜ್ಯೋತಿಷಿಗಳ ಮಾತುಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಶಿಕ್ಷಣ ಪಡೆಯಬಾರದೆಂಬ ದುರುದ್ದೇಶದಿಂದ ಪೂಜೆ, ವಾಸ್ತು, ಜ್ಯೋತಿಷ್ಯಗಳನ್ನು ಸೃಷ್ಠಿಸಿ ಮೂಢನಂಬಿಕೆಗಳಿಂದ ಮಹಿಳೆಯರನ್ನು ಬಂಧಿಸಲಾಗಿದೆ. ಮಹಿಳೆಯರಿಗೆ ರಾಜಕೀಯ, ಶೈಕ್ಷಣಿಕವಾಗಿ ಸಮಾನತೆಯ ಜೊತೆಗೆ ಸಾಮಾಜಿಕ ನ್ಯಾಯ ಸಿಕ್ಕಿದೆ. ಆದರೆ, ಅವರು ಮೂಢನಂಬಿಕೆಯಿಂದ ಇನ್ನೂ ಹೊರ ಬಂದಿಲ್ಲ. 

– ಶ್ರೀ ಬಸವ ಪ್ರಭು ಸ್ವಾಮೀಜಿ

ಜೀವನದಲ್ಲಿ ಸಂತೋಷ ಮತ್ತು ದುಃಖಗಳೆರಡರ ಕ್ಷಣಗಳೂ ಬರಲಿವೆ. ಅಲ್ಲದೇ ಲಾಭ, ನಷ್ಟವೂ ಆಗಲಿದೆ. ಯಾವಾಗ ಲಾಭಕ್ಕಿಂತ ನಷ್ಟವುಂಟಾಗಲಿದೆ. ಆಗ ಬಹಳಷ್ಟು ಪೂಜೆಗಳ ಮಾಡುತ್ತಾರೆ. ಅದರಲ್ಲೂ ಜ್ಯೋತಿಷಿಗಳ ಮಾತು ಕೇಳಿ ಪೂಜೆ, ಪುನಸ್ಕಾರಗಳ ಮಾಡುತ್ತಾ ಮೂಢನಂಬಿಕೆಗಳ ಆಚರಣೆ ಮಾಡುತ್ತಿದ್ದಾರೆ. ಮೂಢನಂಬಿಕೆಯೂ ಸಹ ದೊಡ್ಡ ಶೋಷಣೆ ಎಂದು ಹೇಳಿದರು. 

ಇದೇ ವೇಳೆ ಅಕ್ಕ ಪ್ರಶಸ್ತಿಗೆ ಭಾಜನರಾಗಿದ್ದ ಸಮಾಜ ಸೇವಕರಾದ ಚಂದ್ರಮತಿ ಡಾ. ಶಂಕರ್‌ ಅವರು ಕಾರಣಾಂತರಗಳಿಂದ ಸಮಾರಂಭಕ್ಕೆ ಆಗಮಿಸದ ಕಾರಣ ಅವರಿಗೆ ಪ್ರಶಸ್ತಿಯನ್ನು ತಲುಪಿಸುವ ನಿಟ್ಟಿನಲ್ಲಿ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ ಸ್ವೀಕರಿಸಿದರು. 

ಜಾಲಿನಗರ ಮತ್ತು ರಾಜೀವ್‌ ಗಾಂಧಿ ಬಡಾವಣೆಯ ಅಕ್ಕಮಹಾದೇವಿ ಶಿಶುಪಾ ಲನ ಕೇಂದ್ರ ಹಾಗೂ ನರ್ಸರಿ ಶಾಲೆ ಮಕ್ಕಳು ಅಕ್ಕಮಹಾದೇವಿ, ಬಸವಣ್ಣ ಸೇರಿದಂತೆ ಶಿವಶರಣ-ಶರಣೆಯರ ವೇಷಭೂಷಣ ಧರಿಸಿ ವಚನಗಳ ಹೇಳಿ ಗಮನ ಸೆಳೆದರು. ಅಕ್ಕಮಹಾದೇವಿ ವಧೂವರಾನ್ವೇಷಣ ಕೇಂದ್ರದ ಅಧ್ಯಕ್ಷೆ ಉಮಾ ವೀರಭದ್ರಪ್ಪ ಮಾಂಗಲ್ಯ ವಿತರಣೆ ಮಾಡಿದರು.

ಅಕ್ಕಮಹಾದೇವಿ ಸಮಾಜದ ಉಪಾಧ್ಯಕ್ಷೆ ನೀಲಗುಂದ ಜಯಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ, ಕಾರ್ಯದರ್ಶಿ ದೊಗ್ಗಳ್ಳಿ ಸುವರ್ಣಮ್ಮ, ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ ಅಧ್ಯಕ್ಷೆ ಐ. ವಸಂತ ಕುಮಾರಿ ಇತರರು ಇದ್ದರು. ಸಮಾಜದ ಸದಸ್ಯೆಯರಿಂದ ಪ್ರಾರ್ಥಿಸಲಾಯಿತು. ಮಾಗಾನಹಳ್ಳಿ ರತ್ನಮ್ಮ ಸ್ವಾಗತಿಸಿದರು. ಉಮಾ ಎಮ್ಮಿ ನಿರೂಪಿಸಿದರು. ರಾರಾವಿ ಪುಷ್ಪ ವಂದಿಸಿದರು.